ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ನರೇಗಾ ಯೋಜನೆಯಡಿಯಲ್ಲಿ ಅಂದಾಜು ₹4 ಲಕ್ಷ ಮೊತ್ತದಲ್ಲಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿಯ ಮಾಡುವ ಸಂದರ್ಭದಲ್ಲಿ ಸಿಮೆಂಟ್, ಮರಳು, ಖಡಿ ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡದೆ ಇರುವುದರಿಂದ ಕಾಮಗಾರಿ ಕಳಪೆಯಾಗಿದೆ ಎಂದು ಇಲ್ಲಿಯ ಜನರು ಆರೋಪಿಸಿದ್ದಾರೆ.
ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸಮತಟ್ಟು ಮಾಡದೇ ಕಾಂಕ್ರೀಟ್ ಹಾಕಿದ್ದಾರೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅಲ್ಲಲ್ಲಿ ನೀರು ನಿಲ್ಲುತ್ತದೆ. ರಸ್ತೆ ಮಧ್ಯೆ ನಿರ್ಮಾಣ ಮಾಡಿದ ಚರಂಡಿಯ ಅಗಲವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗಿದ್ದಾರೆ. ಈ ರಸ್ತೆಯ ಕೊನೆಗೆ ಚರಂಡಿ ಅಗಲ ತೀರಾ ಕಡಿಮೆಯಾಗಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕೆಲ ಮನೆಗಳ ಮುಂದೆ ಚರಂಡಿ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ಸಾಧ್ಯತೆ ಇದೆ. ಮನೆಯ ಮುಂದೆ ನೀರು ನಿಲ್ಲವುದರಿಂದ ಗಬ್ಬು ವಾಸನೆ ಬರುತ್ತಿದೆ. ವಾಸಿಸುವುದು ಕಷ್ಟದಾಯಕವಾಗಿದೆ ಎನ್ನುತ್ತಾರೆ.ಈ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ, ಮೇಲುಸ್ತುವಾರಿ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಕೊಂಡು, ಕೂಡಲೇ ಈ ಸಿಸಿ ರಸ್ತೆ ಸಮತಟ್ಟು ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮರು ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾಲಗಿತ್ತಿ ಗ್ರಾಮದಲ್ಲಿ ನಿರ್ಮಿಸಲಾದ ಸಿಸಿ ರಸ್ತೆ ಕಾಮಗಾರಿಯ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ತಿಳಿಸಿದ್ದಾರೆ.