ನಗರದಲ್ಲಿ ಅಕ್ರಮವಾಗಿ ವಾಸವಿದ್ದ 272 ಮಂದಿ ವಿದೇಶಿಗರನ್ನು ಪತ್ತೆ ಹಚ್ಚಿದ್ದ ಸಿಸಿಬಿ ಪೊಲೀಸರು ಇದೀಗ ಅವರನ್ನು ಗಡಿಪಾರು (ಡಿಪೋರ್ಟ್) ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅಕ್ರಮವಾಗಿ ವಾಸವಿದ್ದ 272 ಮಂದಿ ವಿದೇಶಿಗರನ್ನು ಪತ್ತೆ ಹಚ್ಚಿದ್ದ ಸಿಸಿಬಿ ಪೊಲೀಸರು ಇದೀಗ ಅವರನ್ನು ಗಡಿಪಾರು (ಡಿಪೋರ್ಟ್) ಮಾಡಿದ್ದಾರೆ.
ಮಾ.18 ರಿಂದ ಏ.4 ರವರೆಗೂ ನಗರದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ಬಾಂಗ್ಲಾದೇಶ, ನೈಜೀರಿಯಾ, ಉಗಾಂಡ, ರವಾಂಡ ಸೇರಿ ಇತರೆ ದೇಶಗಳ ಪ್ರಜೆಗಳು ಅಕ್ರಮವಾಗಿ ನಗರದಲ್ಲಿ ವಾಸವಿರುವುದನ್ನು ಪತ್ತೆ ಹಚ್ಚಿದ್ದರು. ಪತ್ತೆಯಾದವರ ಪೈಕಿ 168 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಇದ್ದು, ಎಲ್ಲರನ್ನು ಒಟ್ಟಿಗೆ ಗಡಿಪಾರು ಮಾಡಿದ್ದಾರೆ. ಜತೆಗೆ ಸಿಸಿಬಿ ಪೊಲೀಸರು ಬಾಂಗ್ಲಾ ವಲಸಿಗರನ್ನು ಕರೆತರುತಿದ್ದವರ ಮೂಲಕ್ಕೆ ಕೈ ಹಾಕಿದ್ದಾರೆ.
ನಗರದ ಚನ್ನಸಂದ್ರ, ಕೆಂಗೇರಿ, ಬೊಮ್ಮನಹಳ್ಳಿ, ಅತ್ತಿಬೆಲೆ ಮತ್ತಿತರ ಪ್ರದೇಶಗಳಲ್ಲಿ ಈ ವಲಸಿಗರು ನೆಲೆಸಿದ್ದರು. ಅವರಲ್ಲಿ ಹೆಚ್ಚಿನವರು ಕೂಲಿ ಕೆಲಸ, ಕಟ್ಟಡ ನಿರ್ಮಾಣ ಕಾರ್ಯ, ಮನೆಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
‘ಟೇಕೆದಾರ’ರ ನೆಟ್ವರ್ಕ್ ಪತ್ತೆ;
ಈ ಅಕ್ರಮ ವಲಸೆಗಾರರನ್ನು ಭಾರತಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ‘ಟೇಕೆದಾರ’ರ ಬಗ್ಗೆಯೂ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ‘ಟೇಕೆದಾರ’ ಎಂದರೆ ಗಡಿ ದಾಟಿಸಿ, ವಲಸಿಗರಿಗೆ ಭಾರತದಲ್ಲಿ ಕೆಲಸ ಕೊಡಿಸುವ ವ್ಯಕ್ತಿಗಳು. ಈ ಜಾಲವು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಮೊದಲ ಹಂತದಲ್ಲಿ ಬಾಂಗ್ಲಾದೇಶದಲ್ಲಿ ಒಬ್ಬ ಟೇಕೆದಾರನು ವಲಸಿಗರನ್ನು ಸಂಗ್ರಹಿಸಿ ಭಾರತದ ಗಡಿಯವರೆಗೂ ಕರೆತರುತ್ತಿದ್ದ. ಎರಡನೇ ಹಂತದಲ್ಲಿ ಗಡಿಯ ಬಳಿ ಮತ್ತೊಬ್ಬ ಟೇಕೆದಾರನು ಅವರನ್ನು ಅಕ್ರಮವಾಗಿ ಭಾರತದೊಳಗೆ ದಾಟಿಸುತ್ತಿದ್ದ. ಮೂರನೇ ಹಂತದಲ್ಲಿ ಬೆಂಗಳೂರಿನಲ್ಲಿರುವ ಮೂರನೇ ಟೇಕೆದಾರನು ವಲಸಿಗರಿಗೆ ಕೆಲಸ ಹುಡುಕಿಕೊಡುವುದು ಮತ್ತು ಅವರಿಗೆ ವಾಸದ ವ್ಯವಸ್ಥೆ ಮಾಡಿಕೊಡುತ್ತಿದ್ದನು.
ಬೆಂಗಳೂರಿನಲ್ಲಿ ಈ ರೀತಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಟೇಕೆದಾರರನ್ನು ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರದ ಆದೇಶದ ಬಳಿಕ ಸಿಸಿಬಿ ಪೊಲೀಸರು ನಗರದಾದ್ಯಂತ ಸರ್ವೇ ನಡೆಸಿ, ಸ್ಥಳೀಯರು ನೀಡಿದ ಮಾಹಿತಿ ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ಈ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.