ಸಿಸಿ ಕ್ಯಾಮೆರಾಗಳು ಕುರುಡು, ಕಳ್ಳತನ ಸಲೀಸು...!

KannadaprabhaNewsNetwork |  
Published : Dec 18, 2025, 12:15 AM IST
೧೭ಕೆಎಂಎನ್‌ಡಿ-೩ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಳವಡಿಸಿರುವ ಸೀಸಿ ಟೀವಿ ಕ್ಯಾಮೆರಾ. | Kannada Prabha

ಸಾರಾಂಶ

ಮಂಡ್ಯ ಜಿಲ್ಲಾದ್ಯಂತ ಅಪರಾಧ, ಕಳ್ಳತನ ಪ್ರಕರಣಗಳ ಮೇಲೆ ನಿಗಾ ವಹಿಸಲು ಹೆಸರಿಗೆ ಐದು ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳಲ್ಲಿ ಬಹುತೇಕ ಕ್ಯಾಮೆರಾಗಳು ದೃಷ್ಟಿಯನ್ನೇ ಕಳೆದುಕೊಂಡು ಮಂಕಾಗಿವೆ. ಗುಣಮಟ್ಟವಿಲ್ಲದ ಈ ಸಿಸಿ ಕ್ಯಾಮೆರಾಗಳೆದುರಿನಲ್ಲೇ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾದ್ಯಂತ ಅಪರಾಧ, ಕಳ್ಳತನ ಪ್ರಕರಣಗಳ ಮೇಲೆ ನಿಗಾ ವಹಿಸಲು ಹೆಸರಿಗೆ ಐದು ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳಲ್ಲಿ ಬಹುತೇಕ ಕ್ಯಾಮೆರಾಗಳು ದೃಷ್ಟಿಯನ್ನೇ ಕಳೆದುಕೊಂಡು ಮಂಕಾಗಿವೆ. ಗುಣಮಟ್ಟವಿಲ್ಲದ ಈ ಸಿಸಿ ಕ್ಯಾಮೆರಾಗಳೆದುರಿನಲ್ಲೇ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ. ಕಳ್ಳರನ್ನು ಸೆರೆ ಹಿಡಿಯುವಲ್ಲಿಯೂ ಪೊಲೀಸ್ ಇಲಾಖೆ ವಿಫಲವಾಗಿದೆ.

ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದಾರೆ. ವಾರಾಂತ್ಯದಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಾರೆ. ಇದೇ ಸಮಯಕ್ಕೆ ಪ್ರಯಾಣಿಕರ ಸೋಗಿನಲ್ಲಿ ಬರುವ ಕಳ್ಳರು ನಿರ್ಭೀತಿಯಿಂದ ಮಹಿಳೆಯರಿಂದ ಚಿನ್ನದ ಸರ, ಪುರುಷರಿಂದ ಹಣ ಎಗರಿಸಿಕೊಂಡು ಸಲೀಸಾಗಿ ಅಲ್ಲಿಂದ ತೆರಳುತ್ತಿದ್ದಾರೆ.

ತಮಿಳುನಾಡಿನಿಂದ ಬಂದಿರುವ ಕಳ್ಳರ ತಂಡ ಜಿಲ್ಲೆಯ ವಿವಿಧೆಡೆ ಹಂಚಿ ಹೋಗಿ ಕಳ್ಳತನದ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕೆಲವು ತಿಂಗಳಿಂದ ಬಸ್‌ಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ೧೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ, ಇದುವರೆಗೆ ಒಂದೇ ಒಂದು ಪ್ರಕರಣವನ್ನು ಮಾತ್ರ ಬೇಧಿಸಲಾಗಿದೆ ಎಂದು ಪೊಲೀಸರೇ ಒಪ್ಪಿಕೊಳ್ಳುತ್ತಿದ್ದಾರೆ.

ಬಸ್ ನಿಲ್ದಾಣಗಳು, ಹೆದ್ದಾರಿಗಳು, ಜನಸಂದಣಿ ಇರುವ ಜಾಗಗಳಲ್ಲಿ ಅಳವಡಿಸಿರುವ ಸಿಸಿ ಟೀವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದರಲ್ಲಿ ಹಲವಾರು ಸಿಸಿ ಕ್ಯಾಮೆರಾಗಳು ಕೆಟ್ಟುಹೋಗಿವೆ. ಇರುವ ಸಿಸಿ ಟೀವಿ ಕ್ಯಾಮೆರಾಗಳು ಗುಣಮಟ್ಟದಿಂದ ಕೂಡಿಲ್ಲ. ಅಸ್ಪಷ್ಟ ದೃಶ್ಯಾವಳಿಗಳನ್ನು ಒಳಗೊಂಡಿವೆ. ಅನೇಕ ಸಿಸಿ ಕ್ಯಾಮೆರಾಗಳು ನಿರ್ದಿಷ್ಟ ದಿಕ್ಕಿಗೆ ಮುಖ ಮಾಡದೆ ಬೇರೆ ಕಡೆಗೆ ಮುಖಮಾಡಿ ನಿಂತಿವೆ. ಎಚ್‌ಡಿ ರೆಸ್ಯುಲ್ಯೂಷನ್ ಹೊಂದಿರುವ ಸಿಸಿ ಕ್ಯಾಮೆರಾಗಳನ್ನು ಕಾಣುವುದೇ ಅಪರೂಪವೆನಿಸಿದೆ. ಹೀಗಾಗಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ.

ಜಿಲ್ಲೆಯ ಬಸ್ ನಿಲ್ದಾಣ, ಪ್ರಮುಖ ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಸಿಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವೆಲ್ಲವೂ ಸರಿಯಾದ ರೀತಿ ಕಾರ್ಯಾಚರಣೆ ನಡೆಸುತ್ತಿಲ್ಲ. ಜೊತೆಗೆ ಕಳ್ಳತನ ಪ್ರಕರಣಗಳೂ ನಿಂತಿಲ್ಲ. ಹಾಲಿ ಇರುವ ಸಿಸಿ ಟೀವಿ ಕ್ಯಾಮೆರಾಗಳನ್ನು ನಂಬಿಕೊಂಡು ಕಳ್ಳರನ್ನು ಸೆರೆಹಿಡಿಯುವುದು ಕಷ್ಟಸಾಧ್ಯದ ವಿಚಾರ. ಇದರ ನಡುವೆಯೂ ಕಳ್ಳರು ಸಲೀಸಾಗಿ ತಮ್ಮ ಕಾರ್ಯಸಾಧಿಸಿಕೊಳ್ಳುತ್ತಲೇ ಇದ್ದಾರೆ. ಸಾರ್ವಜನಿಕರು ಚಿನ್ನಾಭರಣ-ಹಣ ಕಳೆದುಕೊಳ್ಳುತ್ತಲೇ ಇದ್ದಾರೆ.

ಕಳ್ಳರ ಗುಂಪು ಒಂದೊಂದು ತಾಲೂಕುಗಳಲ್ಲಿ ನೆಲೆಯೂರಿ ಜನರಿಂದ ಚಿನ್ನ-ನಗದನ್ನು ಎಗರಿಸುತ್ತಿದೆ. ಹತ್ತು ಪ್ರಕರಣಗಳಲ್ಲಿ ಒಂದರಲ್ಲಷ್ಟೇ ಕಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಉಳಿದಂತೆ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗದಿರುವುದಕ್ಕೆ ತಮ್ಮ ಅಸಮರ್ಥತೆಯನ್ನೂ ತೋರ್ಪಡಿಸಿಕೊಳ್ಳುತ್ತಿದ್ದಾರೆ.

ಕೆಲವೊಮ್ಮೆ ಬಸ್‌ನಿಲ್ದಾಣ ಸೇರಿದಂತೆ ಇತರೆ ಜನಜಂಗುಳಿ ಇರುವ ಜಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿ ಕಳ್ಳರು ಸೆರೆಯಾದರೂ ಕಳ್ಳರ ಚಿತ್ರಗಳು ಸ್ಪಷ್ಟವಾಗಿ ಕಾಣಿಸುವುದೇ ಇಲ್ಲ. ಅವರನ್ನು ಗುರುತಿಸಲಾಗದಷ್ಟು ಕಳಪೆ ಗುಣಮಟ್ಟದ ದೃಶ್ಯಗಳನ್ನು ಒದಗಿಸುತ್ತಿರುವುದರಿಂದ ಕಳ್ಳರ ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಖಾಸಗಿ ಅಂಗಡಿಗಳು ಅಳವಡಿಸಿರುವ ಸಿಸಿ ಕ್ಯಾಮೆರಾಗಳ ನೆರವಿನಿಂದ ಆರೋಪಿಗಳನ್ನು ಬೇಧಿಸಲಾಗುತ್ತಿದೆ. ಖಾಸಗಿಯಾಗಿ ಅಳವಡಿಸಿರುವ ಎಷ್ಟೋ ಸಿಸಿ ಕ್ಯಾಮೆರಾಗಳು ಕಳ್ಳರನ್ನು ಸೆರೆಹಿಡಿದುಕೊಡುವಲ್ಲಿ ಯಶಸ್ವಿಯಾಗಿವೆ. ಏಕೆಂದರೆ, ಗುಣಾತ್ಮಕ ಚಿತ್ರಗಳನ್ನು ಅವು ಒದಗಿಸುವುದರಿಂದ ಹಲವೆಡೆ ಕಳ್ಳರ ಹೆಡೆಮುರಿ ಕಟ್ಟುವುದಕ್ಕೆ ಸಾಧ್ಯವಾಗಿದೆ.

ಈಗಲಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಇಲಾಖೆಯ ಮೇಲಧಿಕಾರಿಗಳ ಗಮನಸೆಳೆದು ಹೈ-ರೆಸೆಲ್ಯೂಷನ್ ಹೊಂದಿರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕಳ್ಳತನಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.ಜಿಲ್ಲೆಯಲ್ಲಿ ಈ ಹಿಂದೆ ೨೦೦೦ಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಅಳವಡಿಸಲಾಗಿತ್ತು. ಇದೀಗ ೫೫೦೦ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಳವಳ್ಳಿಯಲ್ಲಿ ಸಿಎಸ್‌ಆರ್ ಅನುದಾನದಿಂದ ೧೨೦ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಂಡ್ಯ ನಗರಸಭೆ ಮತ್ತು ಸರ್ಕಾರಕ್ಕೆ ಇಲಾಖೆಯಿಂದ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣ ಹಂಚಿ ಗೆದ್ದವರಿಂದ ಜನಪರ ಆಡಳಿತ ಸಾಧ್ಯವಿಲ್ಲ
ಬಾಲ್ಯವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಶಿಕ್ಷೆ