ಕಡಲೆ ಬೆಳೆಗೆ ಸಿಡಿ ರೋಗ, ಆತಂಕದಲ್ಲಿ ರೈತ ಸಮೂಹ

KannadaprabhaNewsNetwork |  
Published : Dec 09, 2024, 12:47 AM IST
ಪೊಟೋ-ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಡಲೆ ಬೆಳೆಗೆ  ಕಾಣಿಸಿಕೊಂಡಿರುವ ಸಿಡಿ ರೋಗ ಬಾಧೆಗೆ ತುತ್ತಾಗಿರುವ ಬೆಳೆ | Kannada Prabha

ಸಾರಾಂಶ

ಕಳೆದ ನಾಲ್ಕೈದು ದಿನಗಳಿಂದ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದ ಬಿತ್ತಿರುವ ಕಡಲೆ ಬೆಳೆಗೆ ಸಂಕಷ್ಟ ಎದುರಾಗಿದೆ

ಅಶೋಕ ಸೊರಟೂರ ಲಕ್ಷ್ಮೇಶ್ವರ

ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಆದಾಯ ತಂದು ಕೊಡಬಲ್ಲ ಪ್ರಮುಖ ಬೆಳೆಯಾಗಿರುವ ಕಡಲೆ ಬೆಳೆಗೆ ಸಿಡಿ ರೋಗ ಕಾಣಿಸಿಕೊಂಡು ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಈಗಾಗಲೆ ಹೂವಾಡಿಸುವ ಹಂತದಲ್ಲಿರುವ ಕಡಲೆ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡಿ ಕೀಟ ನಿಯಂತ್ರಣ ಮಾಡಿದ್ದರೂ ಕಾಣಿಸಿಕೊಂಡಿರುವ ಸಿಡಿ ರೋಗಕ್ಕೆ ಮದ್ದಿಲ್ಲವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದ ಬಿತ್ತಿರುವ ಕಡಲೆ ಬೆಳೆಗೆ ಸಂಕಷ್ಟ ಎದುರಾಗಿದೆ. ಹವಾಮಾನ ವೈಪರೀತ್ಯದಿಂದ ಬೆಳೆಗೆ ಸಿಡಿ ರೋಗ ಕಾಣಿಸಿಕೊಂಡು ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ. ರಾಮಗೇರಿ, ಮಾಡಳ್ಳಿ, ಬಸಾಪುರ, ಗೊಜನೂರ, ಯಳವತ್ತಿ, ಯತ್ತಿನಹಳ್ಳಿ, ಶಿಗ್ಲಿ, ಗೋವನಾಳ ಮತ್ತಿತರ ಕಡೆಗಳಲ್ಲಿ, ಕಪ್ಪು ಮಣ್ಣಿನ ಪ್ರದೇಶದಲ್ಲಿ ಹೆಚ್ಚಾಗಿ ಕಡಲೆ ಬೆಳೆ ಬೆಳೆಯುತ್ತಾರೆ. ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಸುಮಾರು 8350 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ತಿಳಿಸಿದೆ. ಬೆಳೆಗೆ ಕಾಣಿಸಿಕೊಂಡಿರುವ ಸಿಡಿ ರೋಗ ಇಡೀ ಕ್ಷೇತ್ರವನ್ನೇ ಆವರಿಸುವ ಭೀತಿ ಮತ್ತು ಸಂಕಷ್ಟ ರೈತರಿಗೆ ಎದುರಾಗಿದೆ.

ಮುಂಗಾರಿನ ಹೆಸರು, ಗೋವಿನ ಜೋಳ, ಕಂಠಿ ಶೇಂಗಾ ಬೆಳೆದ ರೈತರು, ಈಗ ಆ ಜಮೀನುಗಳಲ್ಲಿ ಕಡಲೆ, ಜೋಳ, ಗೋಧಿ, ಕುಸುಬಿ ಮತ್ತು ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಆದರೆ ಬಹುತೇಕ ರೈತರು ಲಾಭದಾಯಕವಾದ ಕಡಲೆ ಬಿತ್ತನೆ ಮಾಡಿದ್ದಾರೆ. ಈಗ ಉಂಟಾಗಿರುವ ಕಡಲೆ ಬೆಳೆಗೆ ಕಾಣಿಸಿಕೊಂಡಿರುವ ಸಿಡಿ ರೋಗ ಬಾಧೆಯಿಂದ ಬೆಳೆ ಕಾಪಾಡುವ ಕಾರ್ಯ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ರೈತರಿಗೆ ತಿಳಿಸಿ ಕೊಟ್ಟಲ್ಲಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂದು ಬಹುತೇಕ ರೈತರ ಅಭಿಪ್ರಾಯವಾಗಿದೆ.

ಕಡ್ಲೆ ನಾಶದ ಭೀತಿ...

ಅಣ್ಣಿಗೇರಿಯಲ್ಲಿನ ಕಡಲೆ ಸಂಶೋಧನಾ ಕೇಂದ್ರದ ಅಧಿಕಾರಿಗಳ ಜತೆ ಕಡಲೆ ಬೆಳೆಗೆ ಉಂಟಾಗಿರುವ ಸಿಡಿ ರೋಗದ ಬಗ್ಗೆ ಮಾತಾಡಿದ್ದು, ಕಡಲೆ ಬೆಳೆಯ ಬೇರು ಕಡಿಯುವ ಕೀಟವು ಭೂಮಿ ಒಳಗಡೆ ಅವಿತುಕೊಂಡಿರುತ್ತದೆ. ಕಡಲೆ ಬೆಳೆಯಲ್ಲಿನ ಬೇರು ಕಡಿದು ರಸ ಹೀರುವುದರಿಂದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಇದರಿಂದ ಭೂಮಿಯಲ್ಲಿ ಅವಿತುಕೊಂಡಿರುವ ಕೀಟ ಕೊಲ್ಲುವುದು ಅಸಾಧ್ಯದ ಮಾತಾಗಿದೆ. ಅಲ್ಲದೆ ಬಿತ್ತನೆಗೂ ಮೊದಲೆ ಬೀಜೋಪಚಾರ ಮಾಡಿರುವ ಹೊಲಗಳಲ್ಲಿಯೂ ಸಿಡಿ ರೋಗ ಕಾಣಿಸಿಕೊಂಡಿರುವುದು ಸವಾಲಿನ ಕೆಲಸವಾಗಿದೆ. ಇದೇ ರೀತಿ ಇನ್ನೊಂದು ವಾರ ಮೋಡ ಕವಿದ ವಾತಾವರಣ ಮತ್ತು ಮಳೆ ಮುಂದುವರಿದರೆ ಕಡ್ಲೆ ಬೆಳೆ ನಾಶವಾಗುತ್ತದೆ ಎಂದು ಗೊಜನೂರ ಗ್ರಾಮದ ರೈತರಾದ ವೀರನಗೌಡ ಪಾಟೀಲ, ಚೆನ್ನಪ್ಪ ಷಣ್ಮುಖಿ ಹೇಳುತ್ತಾರೆ.

ಹವಾಮಾನ ವೈಪರೀತ್ಯ ಹಾಗೂ ಬೇರು ಕಡಿಯುವ ಕೀಟದ ಕಾರಣದಿಂದ ಕಡಲೆಗೆ ಬೆಳೆಗೆ ಸಿಡಿ ರೋಗ ಕಾಣಿಸಿಕೊಂಡಿದೆ. ಇದರಿಂದ ಬೆಳೆ ಒಣಗಿ ಮತ್ತು ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ ತಿಳಿಸಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌