ವಕೀಲರಲ್ಲಿ ತಿಳಿಯುವ ಹಂಬಲ ಇರಲಿ, ಅಹಂ ಸುಳಿಯದಿರಲಿ

KannadaprabhaNewsNetwork |  
Published : Dec 09, 2024, 12:47 AM IST
ಚಿಕ್ಕಮಗಳೂರಿನ ರೋಟರಿ ಸಭಾಂಗಣದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾ. ಭಾನುಮತಿ ಅವರು ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಸುಜೇಂದ್ರ, ಶರತ್ಚಂದ್ರ, ಅನಿಲ್‌ಕುಮಾರ್‌ ಹಾಗೂ ವಕೀಲರು ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಹಿರಿಯ ವಕೀಲರ ಅನುಭವ ಹಾಗೂ ವಾದ ಮಂಡಿಸುವ ಚಾಣಕ್ಯತೆಯನ್ನು ಯುವ ವಕೀಲರು ಅನುಸರಿಸಬೇಕು. ಇದರಿಂದ ಕಾಲಕ್ರಮೇಣ ಪರಿಣಿತಿ ಹೊಂದುವ ಮುಖಾಂತರ ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಬಿ.ಎಸ್. ಭಾನುಮತಿ ಹೇಳಿದರು.

- ಪ್ರಭಾರ ನ್ಯಾಯಾಧೀಶೆ ಬಿ.ಎಸ್. ಭಾನುಮತಿ ಸಲಹೆ । ಟಿಎಂಎಸ್ ಕಾಲೇಜಿನ ರೋಟರಿ ಸಭಾಂಗಣದಲ್ಲಿ ವಕೀಲರ ದಿನಾಚರಣೆ - - - ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹಿರಿಯ ವಕೀಲರ ಅನುಭವ ಹಾಗೂ ವಾದ ಮಂಡಿಸುವ ಚಾಣಕ್ಯತೆಯನ್ನು ಯುವ ವಕೀಲರು ಅನುಸರಿಸಬೇಕು. ಇದರಿಂದ ಕಾಲಕ್ರಮೇಣ ಪರಿಣಿತಿ ಹೊಂದುವ ಮುಖಾಂತರ ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಬಿ.ಎಸ್. ಭಾನುಮತಿ ಹೇಳಿದರು.

ನಗರದ ಟಿಎಂಎಸ್ ಕಾಲೇಜಿನ ರೋಟರಿ ಸಭಾಂಗಣದಲ್ಲಿ ವಕೀಲರ ಸಂಘದಿಂದ ಏರ್ಪಡಿಸಿದ್ಧ ವಕೀಲರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವಾದಿಗಳು ಸಮಾಜದ ಮುಖ್ಯಭೂಮಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ರಾಜಕಾರಣ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಸಮಾಜ ಸುಧಾರಣೆಗೆ ಮುಂದಾಗುತ್ತಿರುವುದು ಖುಷಿಯ ಸಂಗತಿ. ಹೀಗಾಗಿ ಪ್ರಾರಂಭದಲ್ಲಿ ಯುವ ವಕೀಲರಿಗೆ ಮಾರ್ಗದರ್ಶನದ ಅಗತ್ಯವಿದೆ. ಕಾನೂನಿನ ತಿಳಿವಳಿಕೆ ಬಗ್ಗೆ ಸಂದೇಹವಿದ್ದಲ್ಲಿ ಹಿರಿಯರಲ್ಲಿ ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು ಎಂದರು.

ವಕೀಲ ವೃತ್ತಿಯಲ್ಲಿ ಎಷ್ಟೇ ತಿಳಿದುಕೊಂಡರೂ ಅಹಂ ಎನ್ನುವುದು ಇರಕೂಡದು. ತಿಳಿವಳಿಕೆ ಹೊಂದಿದ್ದರೂ ಇನ್ನಷ್ಟು ತಿಳಿಯುವ ಹಂಬಲವಿರಬೇಕು. ಯುವ ವಕೀಲರು ಕಲಿಕೆಗೆ ಹೆಚ್ಚಿನ ಮಹತ್ವ ಕೊಡುವುದನ್ನು ರೂಢಿಸಿಕೊಂಡರೆ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಲು ಸಾಧ್ಯ ಎಂದು ತಿಳಿಸಿದರು.

ವಿಧಾನ ಪರಿಷತ್ತು ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸಮಾಜದಲ್ಲಿ ಶೋಷಣೆ, ದೌರ್ಜನ್ಯಗಳಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಿಲುಕಿರುವ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಮತ್ತು ರಕ್ಷಣೆ ಒದಗಿಸುವುದು ವಕೀಲರ ಕರ್ತವ್ಯವಾಗಬೇಕು. ಆಗ ಮಾತ್ರ ನಾಗರೀಕ ಸಮಾಜದಲ್ಲಿ ವಕೀಲರಿಗೆ ಹೆಚ್ಚು ಸ್ಥಾನಮಾನ ದೊರಕಲು ಸಾಧ್ಯ ಎಂದರು.

ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಎಂಜಿನಿಯರ್, ವೈದ್ಯರು, ಶಿಕ್ಷಕರಿಗಿಂತ ವಕೀಲರ ವೃತ್ತಿ ಅತ್ಯಂತ ಪ್ರಮುಖವಾದದು. ಬಡವರ ಪಾಲಿಗೆ ರಕ್ಷಾ ಕವಚದಂತೆ ದುಡಿಯುವ ವಕೀಲರು ಹೆಚ್ಚು ಕಾನೂನು ತಿಳಿವಳಿಕೆ ಮೂಡಿಸಿಕೊಂಡರೆ ಶೋಷಿತರ ಪರವಾಗಿ ಸದೃಢವಾಗಿ ನಿಲ್ಲಬಹುದು ಎಂದರು.

ಪ್ರಸ್ತುತ ರಾಜಕೀಯ ಮುಖಂಡರು ಅಥವಾ ಅಧಿಕಾರಿಗಳು ತಪ್ಪೆಸಗಿದರೆ ಪ್ರಶ್ನಿಸುವ ಗುಣಗಳನ್ನು ವಕೀಲರು ಬೆಳೆಸಿಕೊಳ್ಳಬೇಕು. ಅನ್ಯಾಯವನ್ನು ದೃಢವಾಗಿ ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯ ಅಳವಡಿಸಿಕೊಂಡರೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ನ್ಯಾಯ ಪೀಠದಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಪರಸ್ಪರ ಸಂಬಂಧ ಹೊಂದಾಣಿಕೆಯಿಂದ ಕೂಡಿರಬೇಕು. ಕ್ಷುಲ್ಲಕ ಕಾರಣಗಳಿಗೆ ಮನಸ್ಥಾಪ ಉಂಟಾಗದಂತೆ ಕಕ್ಷಿಗಾರರ ಸೇವೆಗೆ ಮುಂದಾದರೆ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲು ಸಾಧ್ಯ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಕೀಲ ಎಸ್.ಎಸ್. ವೆಂಕಟೇಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತದನಂತರ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಕೀಲರ ವೃತ್ತಿಯಲ್ಲಿ ನಿರಂತರ ಸೇವೆ ಸಲ್ಲಿಸಿದ ಎಂ.ಕೆ. ರಮೇಶ್, ಜಿ.ಎಂ. ಜಯಕುಮಾರ್, ಅನಿಲ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶರತ್ಚಂದ್ರ, ಕಾರ್ಯದರ್ಶಿ ಅನಿಲ್‌ಕುಮಾರ್, ಸಹ ಕಾರ್ಯದರ್ಶಿ ಪ್ರಿಯದರ್ಶಿನಿ, ಖಜಾಂಚಿ ದೀಪಕ್, ನ್ಯಾಯಾಧೀಶರಾದ ವಿ.ಹನುಮಂತಪ್ಪ, ರಾಘವೇಂದ್ರ ಕುಲಕರ್ಣಿ, ಕೃಷ್ಣ, ದ್ಯಾವಪ್ಪ, ಮಂಜುನಾಥ್, ಹರೀಶ್, ಮಂಜು, ನಂದಿನಿ ಉಪಸ್ಥಿತರಿದ್ದರು.

- - -

ಕೋಟ್‌ ಭಾರತದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಜನ್ಮದಿನ ಅಂಗವಾಗಿ ವಕೀಲರ ದಿನಾಚರಣೆ ಆಚರಿಸಲಾಗುತ್ತಿದೆ. ಮಹಾನೀಯರು ತತ್ತ್ವ ಆದರ್ಶ ಹಾಗೂ ಮಾರ್ಗದರ್ಶನವು ಪ್ರತಿ ವಕೀಲರು ಪರಿಪಾಲಿಸಿ ಮುನ್ನಡೆದರೆ ವಕೀಲರ ವೃತ್ತಿಯಲ್ಲಿ ಸೇವೆ ಸಲ್ಲಿಸುವುದಕ್ಕೂ ಸಾರ್ಥಕವಾದಂತೆ

- ಬಿ.ಎಸ್. ಭಾನುಮತಿ, ಪ್ರಭಾರ ನ್ಯಾಯಾಧೀಶೆ

- - - -8ಕೆಸಿಕೆಎಂ1:

ಚಿಕ್ಕಮಗಳೂರಿನ ರೋಟರಿ ಸಭಾಂಗಣದಲ್ಲಿ ನಡೆದ ವಕೀಲರ ದಿನ ಕಾರ್ಯಕ್ರಮವನ್ನು ನ್ಯಾ. ಭಾನುಮತಿ ಉದ್ಘಾಟಿಸಿದರು. ವಿಪ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಸುಜೇಂದ್ರ, ಶರತ್ಚಂದ್ರ, ಅನಿಲ್‌ಕುಮಾರ್‌ ಹಾಗೂ ವಕೀಲರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ