ರೈತರು ಆರೋಗ್ಯವಿದ್ದರೆ ದೇಶವೇ ಆರೋಗ್ಯವಾಗಿರುತ್ತದೆ: ಡಿ.ಸಿ.ತಮ್ಮಣ್ಣ

KannadaprabhaNewsNetwork | Published : Dec 9, 2024 12:47 AM

ಸಾರಾಂಶ

ನಗರ ಪ್ರದೇಶದ ಶ್ರೀಮಂತ ಜನರು ಅತ್ಯಾಧುನಿಕ ಸೌಲಭ್ಯವುಳ್ಳ ದೊಡ್ಡದೊಡ್ಡ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ, ಬಡ ರೈತರು, ಕೂಲಿಕಾರ್ಮಿಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆಯುವಲ್ಲಿ ಮೀನಾಮೇಷ ಎಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಪಯುಕ್ತವಾಗುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಇಡೀ ದೇಶವೇ ಆರೋಗ್ಯವಾಗಿರಲು ರೈತರಿಂದ ಸಾಧ್ಯ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ದೊಡ್ಡರಸಿನಕೆರೆ ಶ್ರೀಕಾಳಿಕಾಂಭ ಪ್ರೌಢಶಾಲಾ ಆವರಣದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾಳಿಕಾಂಭ ಪ್ರೌಢಶಾಲಾ ಸಹಯೋಗದಲ್ಲಿ ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದರು.

ಹಳ್ಳಿಗಳಲ್ಲಿ ಈ ಹಿಂದೆ ಹಿರಿಯರಲ್ಲಿ ಇದ್ದಂತಹ ಆರೋಗ್ಯ ಈಗ ಇಲ್ಲ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಗ್ರಾಮೀಣ ಜನರ ಆರೋಗ್ಯ ಸಾಕಷ್ಟು ಕುಷಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರ ಪ್ರದೇಶದ ಶ್ರೀಮಂತ ಜನರು ಅತ್ಯಾಧುನಿಕ ಸೌಲಭ್ಯವುಳ್ಳ ದೊಡ್ಡದೊಡ್ಡ ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ, ಬಡ ರೈತರು, ಕೂಲಿಕಾರ್ಮಿಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆಯುವಲ್ಲಿ ಮೀನಾಮೇಷ ಎಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಪಯುಕ್ತವಾಗುತ್ತದೆ ಎಂದರು.

ಇದೇ ವೇಳೆ ಶ್ರೀಕಾಳಿಕಾಂಭ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ನಾರಾಯಣ್, ಉಪಾಧ್ಯಕ್ಷ ಮಾಯೀಗೌಡ, ಕಾರ್ಯದರ್ಶಿ ಮಂಚೇಗೌಡ, ನಿರ್ದೇಶಕರುಗಳಾದ ಎಂ.ಸಿ.ವೀರಯ್ಯ, ಮಹೇಂದ್ರ, ಮೂಲೆಅಟ್ಟಿ ಚಂದ್ರಶೇಖರ್, ಚಿಕ್ಕಹುಚ್ಚೇಗೌಡ, ಮುಖ್ಯಶಿಕ್ಷಕ ಶಶಿಧರ್, ಸೇರಿದಂತೆ ಹಲವರಿದ್ದರು.

ಮುಚ್ಚಿರುವ ಸಾರ್ವಜನಿಕರ ರಸ್ತೆ ತೆರವಿಗಾಗಿ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ಸಾರ್ವಜನಿಕರ ರಸ್ತೆಯನ್ನು ತೆರವುಗೊಳಿಸುವಂತೆ ತಾಲೂಕಿನ ದಲಿತ ಮುಖಂಡರು ಪಾಂಡವಪುರ ಉಪ ವಿಭಾಗಾಧಿಕಾರಿ ಡಾ. ಶ್ರೀನಿವಾಸ್ ಅವರಿಗೆ ಮನವಿ ಮಾಡಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ದಲಿತ ಸಂಘಟನೆಗಳ ಮುಖಂಡರು, ರಸ್ತೆ ಮುಚ್ಚಿರುವುದರಿಂದ ರೈತ ಸಮುದಾಯಕ್ಕೆ ಉಂಟಾಗಿರುವ ಸಮಸ್ಯೆಗಳನ್ನು ನಿವೇದಿಸಿಕೊಂಡರು.

ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ಮಾತನಾಡಿ. ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗ ಪಟ್ಟಣದ ನೂರಾರು ರೈತರ ಸಾವಿರಾರು ಎಕರೆ ಕೃಷಿ ಭೂಮಿಯಿದೆ. ಪಾಲಿಟೆಕ್ನಿಕ್ ಆವರಣದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭವಾಗುವವರೆಗೂ ರೈತರಿಗೆ ಯಾವುದೇ ರಸ್ತೆ ಸಮಸ್ಯೆ ಇರಲಿಲ್ಲ. ಕಾಲೇಜು ಆರಂಭವಾದ ಅನಂತರ ಮೂಲ ನಕಾಶೆಯಂತೆ ರೈತರು ಸಂಚರಿಸುತ್ತಿದ್ದ ರಸ್ತೆ ಮುಚ್ಚಿ ರೈತರ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರ್ಯಾಯ ರಸ್ತೆ ನಿರ್ಮಾಣಕ್ಕೆ ಪಾಲಿಟೆಕ್ನಿಕ್ ಸಂಸ್ಥೆ ಸ್ಪಂದಿಸದಿದ್ದರೆ ಸರ್ಕಾರಿ ನಿಯಮಾನುಸಾರ ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ, ರೈತರ ಹಳೆಯ ರಸ್ತೆಯನ್ನು ಬಿಡಿಸಿಕೊಡಬೇಕು. ರಸ್ತೆ ಇಲ್ಲದೆ ರೈತರು ಕೃಷಿ ಚಟುವಟಿಕೆಗಳಿಗೆ ಹೋಗುವುದಿರಲಿ, ಸತ್ತವರ ಶವ ತೆಗೆದುಕೊಂಡು ತಮ್ಮ ಜಮೀನಿಗಳಲ್ಲಿ ಶವ ಸಂಸ್ಕಾರ ಮಾಡಲೂ ಆಗದಂತಾಗಿದೆ ಎಂದು ಅಳಲು ತೋಡಿಕೊಂಡರು.

ಸಮಸ್ಯೆಗಳನ್ನು ಆಲಿಸಿದ ಉಪ ವಿಭಾಗಧಿಕಾರಿ ಡಾ.ಶ್ರೀನಿವಾಸ್, ನಿಯಮಾನುಸಾರ ಕ್ರಮವಹಿಸಿ ರೈತರಿಗೆ ಅಗತ್ಯ ರಸ್ತೆ ಬಿಡಿಸಿಕೊಡುವಂತೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಸೂಚಿಸಿದರು.

ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು , ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜಯ್ಯ, ಮುಖಂಡರಾದ ಮಾಂಬಳ್ಳಿ ಜಯರಾಂ, ಪೌರ ಕಾರ್ಮಿಕರ ಮುಖಂಡ ಬನ್ನಾರಿ, ಹೊಸಹೊಳಲು ಸುರೇಶ್ ಹರಿಜನ ಸೇರಿದಂತೆ ಹಲವರಿದ್ದರು.

Share this article