ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಮಹಾನುಭಾವರು 1980ಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ. ಅಧಿಕಾರ ಯಾರಪ್ಪನ ಆಸ್ತಿಯಲ್ಲ. ನಾವು ಎಲ್ಲ ಅಧಿಕಾರವನ್ನೂ ನೋಡಿಯಾಗಿದೆ ಸಿಡಿ ಡಿ.ಕೆ. ಶಿವು ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ರಾಜಕೀಯದಲ್ಲಿ ಏಳುಬೀಳು ಭಗವಂತನ ಇಚ್ಛೆ. ಇದರಲ್ಲಿ ಅಸೂಯೆ ಯಾಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲಾ ಅಧಿಕಾರವನ್ನು ನಾವು ನೋಡಿಯಾಗಿದೆ ಎಂದರು.
ನನಗೆ ಅವರನ್ನು ಕಂಡರೆ ಅಸೂಯೆ ಅಂತ ಹೇಳಿದ್ದಾರೆ. ನಾನು ಯಾಕೆ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಅಸೂಯೆ ಪಡಲಿ. ವಿಡಿಯೋ ಮಾಡಿರುವುದು ಒಂದು ಭಾಗ. ವಿಡಿಯೋವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ಲವೇ? ವಿಡಿಯೋ ಮಾಡಿದ್ದಕ್ಕಿಂತ ಅದರ ವಿತರಣೆ ಅಪರಾಧ ಅಲ್ವಾ ಎಂದು ಪ್ರಶ್ನಿಸಿದರು.
ಅಧಿಕಾರ ಶಾಶ್ವತ ಅಲ್ಲ. ನಮಗೆ ಅಧಿಕಾರ ಬೇಡ ಅಂದರೂ ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ. ಡಿ.ಕೆ.ಶಿವಕುಮಾರ್ ಅವರ ಸುತ್ತ ಇರುವವರೆಲ್ಲ ಟೆರರಿಸ್ಟ್‌ಗಳು ಎಂದರು.
ಕಾರ್ತಿಕ್ ಡಿಕೆಸು ಬಳಿ ಹೋಗಿದ್ದ: ಪ್ರಜ್ವಲ್‌ರ ಚಾಲಕ ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಸಂಸದ ಡಿ.ಕೆ. ಸುರೇಶ್ ಬಳಿಗೆ ಮೊದಲು ಹೋಗಿದ್ದ. ನಂತರ ಅದನ್ನು ಸಿಡಿ ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ. ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನವಾಗಿದೆ. ಈಗ ಎಂಟು ಜನ ಪೊಲೀಸರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ. ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ತೋರಿಸಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.
ಪ್ರಜ್ವಲ್ ವಿದೇಶಕ್ಕೆ ಹೋಗುತ್ತಿರೋದು ಮೊದಲೇ ಗೊತ್ತಾಗಿದ್ದರೆ ನಾನು ತಡೆಯುತ್ತಿದ್ದೆ. ಆತ ಭಯ ಬಿದ್ದಿರಬಹುದು. ಅದಕ್ಕೆ ಬರುತ್ತಿಲ್ಲ. ಈ ವಿಚಾರದಲ್ಲಿ ವಕೀಲರ ಸಲಹೆ ಬೇಡ. ನೈತಿಕತೆ ಉಳಿಸಿಕೊಳ್ಳಲು ದೇಶಕ್ಕೆ ಹಿಂದಿರುಗಿ ಬಾ ಎಂದು ನಾನು ಆತನಿಗೆ ಹೇಳುತ್ತೇನೆ ಎಂದರು.
ರೈತರ ಆತ್ಮಹತ್ಯೆ ಗಮನಕ್ಕೆ ಬಂದಿದೆಯಾ?: ವಿರೋಧಿಗಳಿಗೆ ತೊಂದರೆ ಕೊಡುವುದು, ದ್ವೇಷದ ರಾಜಕಾರಣ ಮಾಡುವುದಷ್ಟೆ ಈ ಸರ್ಕಾರದ ಕೆಲಸ ಆಗಿದೆ. ಸರ್ಕಾರದ ಪ್ರಯೋಜಕತ್ವದಲ್ಲಿ ಮೇ 30 ರಂದು ಹಾಸನದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿದರೆ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳುಹಿಸುತ್ತೇನೆ ಎಂದು ಇದೇ ವೇಳೆ ವ್ಯಂಗ್ಯವಾಡಿದರು.
ರಾಜ್ಯದ ಹಲವೆಡೆ ಬೆಳೆ ನಾಶವಾಗಿದೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಸರ್ಕಾರ ಹೇಳಿಕೆಗಳಿಗೆ ಮಾತ್ರ ಸಿಮೀತವಾಗಿದೆ. ಮದ್ದೂರು, ಗದಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳುವ ಕೆಲಸ ಆಗಿಲ್ಲ. ಬಿಜೆಪಿಯನ್ನು ದೂರುವುದಷ್ಟೆ ಕಾಂಗ್ರೆಸ್ ಕೆಲಸ ಆಗಿದೆ ಎಂದು ಅವರು ಗುಡುಗಿದರು.