ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಸಿ.ಡಿ.ಗಂಗಾಧರ್ ಅವರಿಗೆ 29 ಫೆಬ್ರವರಿ 2024ರಲ್ಲಿ ಮೈಷುಗರ್ ಅಧ್ಯಕ್ಷರಾಗುವ ಅವಕಾಶ ಒಲಿದುಬಂತು. ಅಲ್ಲಿಂದ ಇಲ್ಲಿಯವರೆಗೂ ಕಾರ್ಖಾನೆ ಅಧ್ಯಕ್ಷರಾಗಿ ಮುಂದುವರೆದಿದ್ದರು. ಹಲವಾರು ವಿರೋಧಗಳು, ಅವ್ಯವಹಾರದ ಆರೋಪಗಳ ನಡುವೆಯೂ ಕಂಪನಿಯ ಸರ್ವಸದಸ್ಯರ ಸಭೆಯನ್ನು ಯಶಸ್ವಿಯಾಗಿ ಮುನ್ನಡೆಸಿ ಜಿಲ್ಲಾ ನಾಯಕರು ಮತ್ತು ವರಿಷ್ಠರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದೀಗ ರಾಜ್ಯ ಸರ್ಕಾರ -ಫೆ.27ರಂದು ನೀಡಿದ ನಿರ್ದೇಶನದನ್ವಯ ಮೈಷುಗರ್ ಸಹಕಾರ ಸಕ್ಕರೆ ಕಾರ್ಖಾನೆಯ ಕಾಯಿದೆಯ ಕಲಂ 93 ಮತ್ತು 119ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಿ.ಡಿ.ಗಂಗಾಧರ್ ಅವರನ್ನು 1 ಮಾರ್ಚ್ 2026ರಿಂದ ಮುಂದಿನ ಆದೇಶದವರೆಗೆ ಕಾರ್ಖಾನೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿ ಆದೇಶಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸರ್ಕಾರದ ಅಧೀನ ಕಾರ್ಯದರ್ಶಿ ಪವಿತ್ರಾ ಎಂದು ತಿಳಿಸಿದ್ದಾರೆ.ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸ್ಥಾನದ ಜೊತೆಗೆ ರಾಜ್ಯ ಸಚಿವ ಸ್ಥಾನ-ಮಾನವನ್ನೂ ಇದೇ ಸಮಯದಲ್ಲಿ ಅವರಿಗೆ ನೀಡಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಎಂಟು ವರ್ಷ ಅಧಿಕಾರ ಪೂರೈಸಿರುವ ಸಿ.ಡಿ.ಗಂಗಾಧರ್ ಆ ಸ್ಥಾನದಲ್ಲೂ ಎಲ್ಲ ನಾಯಕರ ವಿಶ್ವಾಸದೊಂದಿಗೆ ಮುಂದುವರೆದಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಮೈಷುಗರ್ ಅಧ್ಯಕ್ಷ ಸ್ಥಾನ ಎರಡೂ ಹುದ್ದೆಗಳನ್ನು ಸಮಾನವಾಗಿ ಸರಿದೂಗಿಸಿಕೊಂಡು ಹೋಗುತ್ತಿರುವುದರಿಂದ ಸಚಿವರು ಮತ್ತು ಶಾಸಕರೆಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಎರಡು ವರ್ಷ ಕಾಲ ಕಾರ್ಖಾನೆಗೆ ಪೂರೈಕೆಯಾದ ಕಬ್ಬನ್ನು ನುರಿಸಿ ರೈತರ ಬಾಕಿ ಹಣವನ್ನು ಸಕಾಲದಲ್ಲಿ ಪಾವತಿಸುವುದರೊಂದಿಗೆ ರೈತ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಒಗ್ಗಟ್ಟಾಗಿ ಮುನ್ನಡೆಸುವುದರೊಂದಿಗೆ ಕಾರ್ಖಾನೆಯ ಅಧ್ಯಕ್ಷ ಸ್ಥಾನವನ್ನೂ ಇದೀಗ ಗಟ್ಟಿಗೊಳಿಸಿಕೊಂಡಿದ್ದಾರೆ.
ಸಚಿವ ಎನ್.ಚಲುವರಾಯಸ್ವಾಮಿ ಅವರ ಅತ್ಯಾಪ್ತರೆಂದು ಗುರುತಿಸಿಕೊಂಡಿರುವ ಸಿ.ಡಿ.ಗಂಗಾಧರ್ ಶಾಸಕರೂ ಸೇರಿದಂತೆ ಮುಖಂಡರು-ಕಾರ್ಯಕರ್ತರೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಎಲ್ಲಿಯೂ ತಮ್ಮ ವಿರುದ್ಧ ವಿರೋಧಗಳು ವ್ಯಕ್ತವಾಗದಂತೆ, ಎಲ್ಲರ ಸಲಹೆ-ಸೂಚನೆ, ಅಭಿಪ್ರಾಯಗಳನ್ನು ಸಹನೆಯಿಂದಲೇ ಸ್ವೀಕರಿಸುತ್ತಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಮತ್ತು ಮೈಷುಗರ್ ಅಧ್ಯಕ್ಷ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೃಷಿ ಸಚಿವರು, ಶಾಸಕರೆಲ್ಲರ ಸಹಕಾರದೊಂದಿಗೆ ಮೈಷುಗರ್ ಕಾರ್ಖಾನೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಾಗುತ್ತಿದೆ. ನನ್ನ ಕಾರ್ಯದಕ್ಷತೆಯನ್ನು ಗುರುತಿಸಿ ಸರ್ಕಾರ ಅಧ್ಯಕ್ಷ ಸ್ಥಾನದಲ್ಲಿ ನನ್ನನ್ನು ಮುಂದುವರೆಸಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಮತ್ತಷ್ಟು ಸಮರ್ಥವಾಗಿ, ಜವಾಬ್ದಾರಿಯುತವಾಗಿ ಮುನ್ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ್ ಸಕ್ಕರೆ ಕಾರ್ಖಾನೆ