ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಸಿಡಿ ಅನುಪಾತ ಶೇ.50ಕ್ಕಿಂತ ಕಡಿಮೆ: ಶೀಬ ಸಹಜನ್

KannadaprabhaNewsNetwork |  
Published : Mar 05, 2025, 12:34 AM IST
04ಬ್ಯಾಂಕ್‌ | Kannada Prabha

ಸಾರಾಂಶ

ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕಿ ಶೀಬ ಸಹಜನ್ ಸಭೆಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಠೇವಣಿ - ಸಾಲ (ಸಿ.ಡಿ.) ಅನುಪಾತ ಶೇ.50ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿಯಾದ ವಿಷಯ. ಮುಂದಿನ ದಿನಗಳಲ್ಲಿ ಸಿಡಿ ಅನುಪಾತ ಹೆಚ್ಚಿಸಲು ಎಲ್ಲ ಬ್ಯಾಂಕರ್‌ಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕಿ ಶೀಬ ಸಹಜನ್ ಸೂಚಿಸಿದ್ದಾರೆ.ಅವರು ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಕಳೆದ ವರ್ಷ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ.48.41 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.48.47 ರಷ್ಟಾಗಿ ಶೇ.0.06 ರಷ್ಟು ಏರಿಕೆಯಾಗಿದೆ. ಆದರೆ ಸಿಡಿ ಅನುಪಾತ ಶೇ.50ಕ್ಕಿಂತ ಕಡಿಮೆ ಇರುವುದು ಒಳ್ಳೆಯ ಬೆಳವಣಿಗೆಯಲ್ಲ, ಎಲ್ಲ ಬ್ಯಾಂಕುಗಳು ಈ ಅನುಪಾತ ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕು ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಆರ್‌ಬಿಐ ಸೂಚನೆಯಂತೆ ಠೇವಣಿ ಒಟ್ಟು ಮೊತ್ತದ ಶೇ.60ರಷ್ಟು ಸಾಲ ವಿತರಣೆ ಮಾಡಿ ಸಿ.ಡಿ ಅನುಪಾತ ಹೆಚ್ಚುವಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೆಲವು ಬ್ಯಾಂಕ್‌ಗಳಲ್ಲಿ ಸಿ.ಡಿ. ಅನುಪಾತವು ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಸುಧಾರಣೆ ಆಗಬೇಕು ಎಂದರು.

ಜಿಲ್ಲೆಯ ಜೀವನೋಪಾಯದ ಚಟುವಟಿಕೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಠಿಸುವುದಕ್ಕಾಗಿ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 131 ಫಲಾನುಭವಿಗಳಿಗೆ, 40.15 ಕೋಟಿ ರು. ಸಾಲ ವಿತರಿಸಲಾಗಿದೆ. ಈ ಯೋಜನೆಯಡಿ ಸ್ವೀಕೃತವಾದ ಎಲ್ಲ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಶೀಘ್ರ ಸಬ್ಸಿಡಿ ವಿತರಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ 4439 ನಿಗದಿತ ಗುರಿಗೆ 3003 ಗುರಿ ಸಾಧಿಸಿ ಶೇ.67.25, ಎಂ.ಎಸ್.ಎಂ.ಇ ವಲಯಕ್ಕೆ 3425 ಗುರಿ ನಿಗದಿಪಡಿಸಲಾಗಿದ್ದು, 2495 ಗುರಿ ಸಾಧಿಸಿ ಶೇ.72.85 ರಷ್ಟು, ಶಿಕ್ಷಣ ವಲಯಕ್ಕೆ 139 ನಿಗದಿತ ಗುರಿಗೆ 113 ಸಾಧನೆ ಮಾಡಿ ಶೇ.81.15ರಷ್ಟು, ವಸತಿ ಕ್ಷೇತ್ರಗಳಿಗೆ 369 ನಿಗದಿತ ಗುರಿಗೆ 197 ಗುರಿ ಸಾಧಿಸಿ ಶೇ.53.33 ರಷ್ಟು ಹಾಗೂ ಇತರೆ ವಲಯಗಳಿಗೆ 422 ನಿಗದಿತ ಗುರಿಗೆ, 281 ಗುರಿ ಸಾಧಿಸಿ ಶೇ.66.66 ಸಾಧನೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಆರ್‌ಬಿಐನ ಪ್ರತಿನಿಧಿ ಇಳಾ ಸಾಹು, ಮಂಗಳೂರು ನಬಾರ್ಡ್‌ನ ಡಿ.ಡಿ.ಎಂ. ಸಂಗೀತಾ ಕಾರ್ಥಾ, ಎಸ್‌ಸಿಡಿಸಿಸಿ ಬ್ಯಾಂಕಿನ ಸಹಾಯ ಮಹಾಪ್ರಬಂಧಕ ರಾಜೇಶ್ ಶೆಟ್ಟಿ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಬ್ಯಾಂಕ್‌ಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ