- ಹೊನ್ನಾಳಿ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಿಐ ಸುನೀಲ್‌ಕುಮಾರ್ ಮನವಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ಬಾರಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಶಾಂತಿಭಂಗ ಉಂಟಾಗದಂತೆ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಗಲಾಟೆಗಳಿಗೆ ಆಸ್ಪದ ಕೊಡದೆ ಶಾಂತಿಯಿಂದ ಗಣೇಶ ಹಬ್ಬ ಆಚರಿಸಿ, ಮೂರ್ತಿಗಳನ್ನು ನಿಯಮಬದ್ಧವಾಗಿ ವಿಸರ್ಜನೆ ಮಾಡಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಹೇಳಿದರು.ಗಣೇಶ ಚತುರ್ಥಿ ಹಿನ್ನೆಲೆ ಶುಕ್ರವಾರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಗಣೇಶ ಮೂರ್ತಿಯನ್ನು 15 ದಿನಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಡಿಜೆ ಸೌಂಡ್ ಸಿಸ್ಟಂಗೆ ಅನುಮತಿ ಕೊಡುವುದಿಲ್ಲ. ಡಿಜೆ ಬಿಟ್ಟು ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ಅಭ್ಯಂತರ ಇಲ್ಲ ಎಂದರು.
ಕಳೆದ ವರ್ಷ ಗಣೇಶ ವಿಸರ್ಜನೆ ವೇಳೆ ಕೆಲವೊಂದು ಅಹಿತಕರ ಘಟನೆಗಳಾಗಿವೆ. ಡಿಜೆ ಸೌಂಡ್ಸ್ ಸಿಸ್ಟಂಗೆ ಆರ್ಡರ್ ನೀಡಬೇಡಿ. ಗಣೇಶ ಹಬ್ಬವನ್ನು ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ರಾಷ್ಟ್ರೀಯ ಹಬ್ಬ ಮಾಡಿದ ಉದ್ದೇಶ ಎಲ್ಲರೂ ಒಂದಾಗಿ ಶಾಂತಿ- ಸಹಬಾಳ್ವೆಯಿಂದ ಹಬ್ಬ ಆಚರಿಸಲಿ ಎಂಬುದಾಗಿದೆ. ಆದರೆ ಕೆಲ ಯುವಕರು ಗಣೇಶ ಮೂರ್ತಿ ವಿಸರ್ಜನೆ ವೇಳೆ ಕುಡಿದು, ಕುಪ್ಪಳಿಸಿ ಗಲಾಟೆ ಮಾಡಿಕೊಂಡು ಗಣೇಶ ವಿಸರ್ಜನೆ ಮಾಡುತ್ತಿ್ದಾರೆ. ಹೀಗಾದರೆ ಹಬ್ಬ ಆಚರಣೆ ಸಾರ್ಥಕ ಎನಿಸುವುದಿಲ್ಲ ಎಂದರು.ಹೊನ್ನಾಳಿ ತಾಲೂಕಿನಲ್ಲಿ 225 ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಅಷ್ಟೂ ಗಣಪತಿ ಸಮಿತಿಯವರು ಐದಾರು ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಮೂರ್ತಿ ವಿಸರ್ಜನೆ ಸಮಯದಲ್ಲಿ ಮೆರವಣಿಗೆ ಯಾವ ದಾರಿಯಲ್ಲಿ ಹೋಗಬೇಕು ಎಂಬುದನ್ನು ಇಲಾಖೆ ನಿರ್ಧರಿಸುತ್ತದೆ. ಗಣಪತಿ ಪೆಂಡಾಲ್‌ನಲ್ಲಿ ಬೆಳಗ್ಗೆಯಿಂದ ಸಂಜೆ ಹಾಗೂ ಸಂಜೆಯಿಂದ ರಾತ್ರಿವರೆವಿಗೂ ಯಾರು ಇರುತ್ತಾರೆ ಎಂಬುದನ್ನು ಠಾಣೆಗೆ ತಿಳಿಸಬೇಕು. ಸಿಸಿ ಕ್ಯಾಮರಾ ಇದ್ದರೆ ಒಳಿತು ಎಂದ ಅವರು, ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸುವುದಕ್ಕೆ ಪೊಲೀಸ್ ಅನುಮತಿ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂ ಮಹಾಗಣಪತಿ ಪ್ರಮುಖರಾದ ನಾಗರಾಜ್ ಬಿಸಾಟಿ ಮಾತನಾಡಿ, ನಾವುಗಳು ಶಾಂತಿ ಸೌಹಾರ್ದದಿಂದ ಮೆರವಣಿಗೆ ನಡೆಸುತ್ತೇವೆ. ನೀವು ಹೇಳಿದ ಕಾಲ ಮಿತಿಯಲ್ಲೇ ಮೂರ್ತಿ ವಿಸರ್ಜನೆಯನ್ನು ಹಮ್ಮಿಕೊಳ್ಳುತ್ತೇವೆ. ಶಾಂತಿ-ಸೌಹಾರ್ದ ನಿರ್ಮಾಣಕ್ಕೆ ಪೊಲೀಸರ ಸಹಕಾರ ಅತ್ಯಗತ್ಯ ಎಂದರು.ತರಗನಹಳ್ಳಿ ಮುಖಂಡ ರಮೇಶ್‌ಗೌಡ ಹಾಗೂ ವಿನಯ್ ವಗ್ಗರ್ ಮಾತನಾಡಿದರು. ಪಿಎಸ್‌ಐಗಳಾದ ನಿರ್ಮಲ, ಕುಮಾರ್, ಎಎಸ್‌ಐ ಹರೀಶ್, ಸಿಬ್ಬಂದಿ ದೊಡ್ಡಬಸಪ್ಪ, ಜಗದೀಶ್, ರಾಮಚಂದ್ರಪ್ಪ, ಗಣೇಶ ಸಮಿತಿಯವರಾದ ನೀಲಕಂಠಪ್ಪ, ಲೋಕೇಶಪ್ಪ, ಸಚ್ಚಿನ್, ರಾಜಪ್ಪ, ಶಂಕರಗೌಡ, ರಾಜಪ್ಪ, ಮಂಜಪ್ಪ, ಅಣ್ಣಪ್ಪ ಹಾಗೂ ಇತರರು ಇದ್ದರು.
- - -(ಕೋಟ್) ಪರಿಸರಕ್ಕೆ ಹಾನಿ ತಪ್ಪಿಸಲು ಪಿಒಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ರದ್ದುಗೊಳಿಸಲಾಗಿದೆ. ಮಣ್ಣಿನಿಂದ ತಯಾರು ಮಾಡಿರುವ ಗಣಪತಿಗಳನ್ನೇ ಪ್ರತಿಷ್ಠಾಪಿಸಬೇಕು. ಪಿಒಪಿ ಗಣಪತಿ ಖರೀದಿ ಮಾಡಬೇಡಿ.
- ಸುನೀಲ್‌ಕುಮಾರ್, ಪಿಐ- - -
-25ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಮಾತನಾಡಿದರು. ಪಿಎಸೈಗಳಾದ ನಿರ್ಮಲ, ಕುಮಾರ್ ಇತರರು ಇದ್ದರು.