ಪರಿಸರಸ್ನೇಹಿಯಾಗಿ ಗಣೇಶನ ಹಬ್ಬ ಆಚರಿಸಿ: ಬಿ.ಕೆ. ಸಂತೋಷ್‌

KannadaprabhaNewsNetwork | Published : Sep 1, 2024 1:57 AM

ಸಾರಾಂಶ

ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಶಿಫಾರಸು ಮಾಡಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಹೀಗಾಗಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು.

ಕಾರವಾರ: ಮಣ್ಣಿನಿಂದ ತಯಾರಿಸಿದ, ನೈಸರ್ಗಿಕ ಬಣ್ಣವನ್ನು ಬಳಸಿದ ಗಣೇಶ ವಿಗ್ರಹಗಳನ್ನು ಪೂಜಿಸುವ ಮೂಲಕ, ಪರಿಸರಸ್ನೇಹಿ ಗಣೇಶ ಹಬ್ಬವನ್ನು ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ತಿಳಿಸಿದರು.ಅಂಕೋಲಾ ಪಟ್ಟಣದಲ್ಲಿ ಆಯೋಜಿಸಿದ್ದ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೇವಲ ಮಣ್ಣಿನ ಗಣೇಶನನ್ನು ಬಳಸುವಂತೆ ಹಾಗೂ ಹಸಿರು ಪಟಾಕಿಗಳನ್ನು ಸಿಡಿಸುವಂತೆ ಕುರಿತಾದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಗಣೇಶ ವಿಗ್ರಹಗಳನ್ನು ತಯಾರು ಮಾಡಲಾಗುತ್ತಿದ್ದು, ವಿಗ್ರಹಗಳ ತಯಾರಿಕೆಗೆ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳು ಹಾಗೂ ಭಾರ ಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣಗಳನ್ನು ಉಪಯೋಗಿಸಿ ನೀರಿನ ಮೂಲಗಳಿಗೆ ವಿಸರ್ಜಿಸುವುದರಿಂದ ನೀರಿನ ಮೂಲಗಳಾದ ಕೆರೆ, ಬಾವಿ, ನದಿ ಇತ್ಯಾದಿಗಳಲ್ಲಿ ನೀರು ಕಲುಷಿತಗೊಂಡು ಪರಿಸರ ಹಾಗೂ ನೀರು ಮಾಲಿನ್ಯವಾಗುವ ಸಂದರ್ಭಗಳು ಹೆಚ್ಚಾಗಿವೆ. ಹಬ್ಬದ ಸಂದರ್ಭದಲ್ಲಿ ಅಲಂಕಾರಿಕ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಜಾಗೃತಿ ಮೂಡಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ವಿದ್ಯಾರ್ಥಿಗಳಿಗೆ ಹಬ್ಬದ ಸಂದರ್ಭದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಬಳಸುವಂತೆ ತಿಳಿಸಿದರು.

ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಶಿಫಾರಸು ಮಾಡಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಹೀಗಾಗಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದರು.ಪಟಾಕಿಯನ್ನು ಬಳಸುವುದರಿಂದ ಆಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಜಲಮಾಲಿನ್ಯ ಮತ್ತು ಸ್ಫೋಟದ ತೀವ್ರತೆಯಿಂದ ಜೀವಸಂಕುಲಗಳಿಗೆ ಆಗುವ ಅನಾಹುತಗಳ ಬಗ್ಗೆ ತಿಳಿಸಿದರು.

ಕೆಎಲ್‌ಇ ಸೊಸೈಟಿಯ ವಿ.ಕೆ. ಹೈಸ್ಕೂಲ್ ವಿಜ್ಞಾನ ಶಿಕ್ಷಕಿ ಗಿರಿಜಾ ತಳವಾರ ಅಧ್ಯಕ್ಷತೆ ವಹಿಸಿದ್ದರು. ಸಂಗಮ ಸೇವಾ ಸಂಸ್ಥೆಯ ಬಾಳೆಗುಳಿ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Share this article