ಶಾಂತಿ, ಸೌಹಾರ್ದದಿಂದ ಗಣೇಶೋತ್ಸವ ಆಚರಿಸಿ: ಸಿಪಿಐ ವೀರಭದ್ರಯ್ಯ ಹಿರೇಮಠ

KannadaprabhaNewsNetwork |  
Published : Sep 10, 2026, 02:00 AM IST
ಶಿಗ್ಗಾಂವಿ ಪಟ್ಟಣದ ಡಾ. ಅಂಬೇಡ್ಕರ್ ಸಂಕೀರ್ಣದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಶಾಂತಿಸಭೆಯಲ್ಲಿ ಸಿಪಿಐ ವೀರಭದ್ರಯ್ಯ ಹಿರೇಮಠ ಮಾತನಾಡಿದರು. | Kannada Prabha

ಸಾರಾಂಶ

ವಿವಾದಾತ್ಮಕ ಸ್ಥಳಗಳಲ್ಲಿ ಮಂಟಪ ನಿರ್ಮಾಣ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶಿಗ್ಗಾಂವಿ: ಸರ್ಕಾರದ ಆದೇಶ ಹಾಗೂ ಪೊಲೀಸ್ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಶಾಂತಿ, ಸೌಹಾರ್ದತೆ ಮತ್ತು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಬೇಕು ಎಂದು ವೃತ್ತ ನಿರೀಕ್ಷಕ (ಸಿಪಿಐ) ವೀರಭದ್ರಯ್ಯ ಹಿರೇಮಠ ಹೇಳಿದರು.

ಪಟ್ಟಣದ ಡಾ. ಅಂಬೇಡ್ಕರ್ ಸಂಕೀರ್ಣದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಂತರ ನಾಡಾದ ಶಿಗ್ಗಾಂವಿಯಲ್ಲಿ ಶಾಂತಿಸಭೆಯ ಅವಶ್ಯಕತೆ ಇಲ್ಲದಿದ್ದರೂ, ಸರ್ಕಾರದ ನಿರ್ದೇಶನದಂತೆ ಸಭೆ ನಡೆಸಲಾಗುತ್ತಿದೆ. ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.

ವಿವಾದಾತ್ಮಕ ಸ್ಥಳಗಳಲ್ಲಿ ಮಂಟಪ ನಿರ್ಮಾಣ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಯ ದಿನಾಂಕವನ್ನು ಎಲ್ಲ ಗಣೇಶೋತ್ಸವ ಮಂಡಳಿಗಳು ಪೂರ್ವಭಾವಿಯಾಗಿ ಚರ್ಚಿಸಿ ಅಂತಿಮಗೊಳಿಸಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸುರಕ್ಷತೆಗೆ ಆದ್ಯತೆ ನೀಡಿ, ಅಗತ್ಯ ಅನುಮತಿಗಳನ್ನು ಪಡೆಯುವುದು ಕಡ್ಡಾಯ ಎಂದರು.

ಶಬ್ದಮಾಲಿನ್ಯ ಉಂಟುಮಾಡುವ ಹಾನಿಕಾರಕ ಧ್ವನಿವರ್ಧಕ ಹಾಗೂ ಡಿಜೆಗಳಿಗೆ ಅನುಮತಿ ಇಲ್ಲ. ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ನಿರ್ಬಂಧವಿದ್ದು, ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠ್ಠಾಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಲು ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ವಿಸರ್ಜನೆ ಬೆಳಗ್ಗೆ ೬ರಿಂದ ರಾತ್ರಿ ೧೦ರೊಳಗೆ ಪೂರ್ಣಗೊಳಿಸಿ:

ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮವನ್ನು ಬೆಳಗ್ಗೆ ೬ರಿಂದ ರಾತ್ರಿ ೧೦ರೊಳಗೆ ಪೂರ್ಣಗೊಳಿಸಬೇಕು. ವಿಸರ್ಜನಾ ಸಂದರ್ಭದಲ್ಲಿ ಮದ್ಯಪಾನ ಮಾಡಿದ ಯುವಕರಿಗೆ ಅವಕಾಶ ನೀಡಬಾರದು. ಸ್ವಯಂಸೇವಕರು ಒಂದೇ ಮಾದರಿಯ ಉಡುಪು ಧರಿಸುವ ಮೂಲಕ ಗುರುತಿಸಿಕೊಳ್ಳುವಂತಿರಬೇಕು. ವಿಸರ್ಜನೆ ಪೂರ್ಣಗೊಂಡ ೨೪ ಗಂಟೆಯೊಳಗೆ ಮಂಟಪ ತೆರವುಗೊಳಿಸಬೇಕು ಎಂದು ಸಿಪಿಐ ಸೂಚಿಸಿದರು.

ಡಿವೈಎಸ್ಪಿ ಗುರುಶಾಂತಪ್ಪ ಮಾತನಾಡಿ, ಡಿಜೆಗಳಿಗೆ ದುಬಾರಿ ಹಣ ಖರ್ಚು ಮಾಡುವ ಬದಲು ಅದೇ ಹಣವನ್ನು ಸ್ಥಳೀಯ ಕಲಾವಿದರಿಗೆ ನೀಡುವ ಮೂಲಕ ಅವರ ಬದುಕಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ಪಾದಗಟ್ಟಿ ಬಳಿಯ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯುತ್ತಿದ್ದು, ಅಲ್ಲಿ ಕೆಲವರು ಭೂಮಿ ಅತಿಕ್ರಮಿಸಿಕೊಂಡಿದ್ದಾರೆ. ಅತಿಕ್ರಮಣವನ್ನು ತಕ್ಷಣ ತೆರವುಗೊಳಿಸಿ, ವಿಸರ್ಜನಾ ಸ್ಥಳದಲ್ಲಿ ಪುರಸಭೆಯ ವತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಶಿಗ್ಗಾಂವಿ ಅಂಜುಮನ್ ಸಮಿತಿ ಅಧ್ಯಕ್ಷ ಮೌಲಾಲಿ ದೊಡ್ಡಮನಿ, ಹಿಯರಾದ ಫಕ್ಕೀರಪ್ಪ ದುಂದುರ, ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ, ಹೆಸ್ಕಾಂ ಅಧಿಕಾರಿಗಳಾದ ಎಫ್.ಜಿ. ಪೂಜಾರ ಮಾತನಾಡಿದರು.

ಪಿಎಸ್‌ಐ ಉಮಾ ಪಾಟೀಲ, ಡಿ.ಎಚ್. ಬಂಡಿವಡ್ಡರ ಅಗ್ನಿಶಾಮಕ ದಳದ ಎಫ್‌ಎಸ್‌ಒ ವೆಂಕಟೇಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಾಯಕನಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಕುಷ್ಟಗಿ ತಾಲೂಕು ಬರಪೀಡಿತ ಘೋಷಣೆಗೆ ಆಗ್ರಹ, ರೈತರ ಪಾದಯಾತ್ರೆ