ಕನ್ನಡಪ್ರಭ ವಾರ್ತೆ ಮಧುಗಿರಿ
ಗೌರಿ- ಗಣೇಶ ಹಾಗೂ ಈದ್‌ಮಿಲಾದ್ ಹಬ್ಬಗಳನ್ನು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ತಿಳಿಸಿದರು.ಮಂಗಳವಾರ ಇಲ್ಲಿನ ಪೊಲೀಸ್ ಠಾಣಾ ಆವರಣದಲ್ಲಿ ಗೌರಿ- ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ ಹಿಂದೂ ಮತ್ತು ಮುಸ್ಲಿಂ ಬಂಧುಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ಮಾತನಾಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಡಿಜೆಗೆ ಅನುಮತಿ ಇಲ್ಲ, ಯಾರೂ ಸಹ ಡಿಜೆ ಉಪಯೋಗಿಸುವಂತಿಲ್ಲ. ತಾವು ಹೊರಡುವ ಮೆರವಣಿಗೆ ಮಾರ್ಗವನ್ನು ಮೊದಲೇ ತಿಳಿಸಿರಬೇಕು. ಮಧುಗಿರಿಯು ಕೋಮು- ಸೌರ್ಹಾದತೆ ಕಾಪಾಡಿಕೊಂಡು ಬಂದಿದ್ದು, ಸ್ಥಳೀಯರಿಂದ ಯಾವುದೇ ಗಲಭೆ ಕಂಡು ಬಂದಿಲ್ಲ, ಹೊರಗಿನವರು ಬಂದು ಗಲಾಟೆ ಎಬ್ಬಿಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.ವೃತ್ತ ನಿರೀಕ್ಷಕ ಹನುಮಂತರಾಯಪ್ಪ ಮಾತನಾಡಿ, ಯಾವುದೇ ರೀತಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಬಲವಂತದಿಂದ ಯಾರೂ ಸಹ ನಾಗರಿಕರಿಂದ ವಂತಿಕೆ ಕೇಳಬಾರದು, ಊರಿಗೊಂದು ಗಣೇಶ ಇಟ್ಟರೆ ಗ್ರಾಮ ಮತ್ತು ಪಟ್ಟಣದಲ್ಲಿ ಶಾಂತಿಯ ವಾತಾವರಣವಿರಲಿದೆ ಎಂದು ತಿಳಿಸಿದರು. ಮಧುಗಿರಿ ಉಪ ನಿರೀಕ್ಷಕ ಮುತ್ತುರಾಜ್ ಮಾತನಾಡಿ, ಗಣೇಶನ ಪ್ರತಿಷ್ಠಾಪಿಸಲು ಅನುಮತಿ ಪಡೆದವರು ಗಣೇಶನ ವಿಸರ್ಜಿಸುವವರೆಗೂ ಅವರೇ ನೇರ ಹೊಣೆಗಾರರು. ಅಹಿತಕರ ಘಟನೆಗಳು ನಡೆದ ವೇಳೆ ನನಗೆ ಗೊತ್ತಿಲ್ಲವೆಂದು ನುಣಿಚಿ ಕೊಳ್ಳಬಾರದು ಎಂದರು.
ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಸರ್ಜನೆಗೆ ಪುರಸಭೆಯಿಂದ ಮೊಬೈಲ್ ವಾಹನ ನಿಮ್ಮ ಮನೆಗಳ ಮುಂದೆಯೇ ಬರಲಿದ್ದು, ಅದರಲ್ಲೇ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲೇ ಗಣಪತಿ ವಿಸರ್ಜನೆಗೆ ಕೃತಕ ನೀರಿನ ತೊಟ್ಟಿ ಮಾಡಲಾಗಿದೆ ಎಂದರು.ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್, ಬೆಸ್ಕಾಂ ಇಂಜಿನಿಯರ್ ಚಿದಾನಂದ, ಅಗ್ನಿಶಾಮಕ ಠಾಣೆಯ ಹನುಮಂತರಾಯಪ್ಪ, ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ಪತ್ರಕರ್ತರಾದ ಜಿ.ನಾರಾಯಣರಾಜು, ಎಂ.ಎಸ್.ರಘುನಾಥ್ ಹಾಗೂ ಪುರಸಭೆ ಸದಸ್ಯ ಆಲೀಮ್, ಜಾಮೀಯಾ ಮಸೀದಿ ಅಧ್ಯಕ್ಷರು, ವಿದ್ಯಾಗಣಪತಿ ಮಹಾಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.
-----‘ಆಯೋಜಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ ಎಚ್ಚರವಿರಲಿ, ಅಶ್ಲೀಲ ನೃತ್ಯಗಳಿಗೆ ಅವಕಾಶವಿಲ್ಲ. ಮಹಿಳೆಯರು ಕುಳಿತು ನೋಡುವಂಥ ಕಾರ್ಯಕ್ರಮ ಆಯೋಜಿಸಬೇಕು, ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದಲ್ಲಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.’
ಮಂಜುನಾಥ್ ಡಿ.ವೈಎಸ್‌ಪಿ .ಮಧುಗಿರಿ.