- ಸಮ್ಮೇಳನ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್ ಹೆಬ್ರಿ । ಐದು ರಾಜ್ಯಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿ, ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾಹಿತಿ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇದೇ ಮೊದಲ ಬಾರಿಗೆ ಅಂತಾರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಚಿಕ್ಕಮಗಳೂರು ಜಿಲ್ಲಾ ಘಟಕಗಳು ಒಳಗೊಂಡಂತೆ ಆ. 22 ರಂದು ನಾಡೋಜ ಡಾ. ಮಹೇಶ್ ಜೋಶಿ ನೇತೃತ್ವದಲ್ಲಿ ಮಂತ್ರಾಲಯದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಡಾ. ಪ್ರದೀಪ್ ಕುಮಾರ್ ಹೆಬ್ರಿ ಸಮ್ಮೇಳನ ಅಧ್ಯಕ್ಷರಾಗಿದ್ದು, ಮಂತ್ರಾಲಯದ ಪೀಠದ ಶ್ರೀ ಸುಭುದೇಂದ್ರ ತೀರ್ಥರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ, 9.30ಕ್ಕೆ ಶ್ರೀ ಸುಭುದೇಂದ್ರ ತೀರ್ಥರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಡಾ. ನಾಡೋಜ ಮಹೇಶ್ ಜೋಶಿ ಭುವನೇಶ್ವರಿ ಭಾವಚಿತ್ರದ ಅನಾವರಣಗೊಳಿಸಲಿದ್ದು, ಅಯೋಧ್ಯ ರಾಮಲಲ್ಲಾ ಶಿಲ್ಪಿ ಮೈಸೂರಿನ ಡಾ. ಅರುಣ್ ಯೋಗಿರಾಜ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವರು. ಕಸಾಪ ಕೋಶಾಧ್ಯಕ್ಷ ಡಿ. ಆರ್. ವಿಜಯಕುಮಾರ್, ಆಂಧ್ರಪ್ರದೇಶ ಘಟಕ ಅಧ್ಯಕ್ಷ ಅಂಜನ್ ಕುಮಾರ್, ತೆಲಂಗಾಣ ಘಟಕ ಅಧ್ಯಕ್ಷ ಡಾ. ಗುಡುಗಂಟಿ ವಿಠಲ್, ಮಹಾರಾಷ್ಟ್ರ ಘಟಕ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಗೋವಾ ಘಟಕ ಅಧ್ಯಕ್ಷ ಡಾ.ಸಿದ್ದಣ್ಣ ಸಂಗಪ್ಪ ಮೇಟಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಮೊದಲನೇ ಗೋಷ್ಠಿ ಗಡಿನಾಡು ಕನ್ನಡಿಗರ ಕೊಡುಗೆ, ಬೆಳಗ್ಗೆ 10.30 ರಿಂದ 12 ರವರೆಗೆ ನಡೆಯಲಿದೆ. ತೆಲಂಗಾಣ ಹಿರಿಯ ಸಾಹಿತಿ ಅಮರ ದೀಕ್ಷಿತ್ ಪ್ರವೇಶ ನುಡಿಯೊಂದಿಗೆ ಆರಂಭವಾಗುವ ಗೋಷ್ಠಿ ಅಧ್ಯಕ್ಷತೆಯನ್ನು ತೆಲಂಗಾಣ ಗೋನಾ ಕಿರಿಯ ಸಾಹಿತಿ ಕಿಶನ್ ರಾವ್ ವಹಿಸಲಿದ್ದಾರೆ. ವಿಷಯ ಮಂಡನೆಯನ್ನು ಹೈದರಾಬಾದ್ ನ ಹಿರಿಯ ಸಾಹಿತಿ ಧರ್ಮೇಂದ್ರ ಪೂಜಾರಿ ಭಗ್ಧರಿ, ಆಂಧ್ರಪ್ರದೇಶದ ಹಿರಿಯ ಸಾಹಿತಿ ಡಾಕ್ಟರ್ ಮರುಳಾರಾದ್ಯ ವಿಷಯ ಮಂಡಿಸಲಿದ್ದಾರೆ.2ನೇಯದಾಗಿ ನಡೆಯುವ ಗಮಕಗೋಷ್ಠಿಯಲ್ಲಿ ಕುಮಾರವ್ಯಾಸ ಭಾರತದ ಕಥಾ ಪ್ರಸಂಗ ಅಧ್ಯಕ್ಷತೆ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಎ.ವಿ. ಪ್ರಸನ್ನ ವಹಿಸಲಿದ್ದಾರೆ. ಸಾಹಿತಿ ಚಂದ್ರಕಲಾ ಕೊಪ್ಪ ಉದ್ಘಾಟಿಸಲಿದ್ದು, ತರೀಕೆರೆಯ ಸುನಿತಾ ಕಿರಣ್ ಗಮಕ ವಾಚನದ ವ್ಯಾಖ್ಯಾನವನ್ನು ಗಮಕಿಗಳಾದ ಶಿವಮೊಗ್ಗ ರಾಮಸುಬ್ಬರಾಯಶೇಟ್ ನೆರವೇರಿಸಲಿದ್ದಾರೆ.
ಮೂರನೇಯದಾಗಿ ಬಹು ಭಾಷೆ ಕವಿ ಗೋಷ್ಠಿಯ ಅಧ್ಯಕ್ಷತೆ ತೆಲಂಗಾಣ ಬಹುಭಾಷಾ ಹಿರಿಯ ಸಾಹಿತಿ ಚಂದಕ ಚೆರ್ಲಾ ರಮೇಶ್ ಬಾಬು ವಹಿಸಲಿದ್ದು, ಆಂಧ್ರಪ್ರದೇಶದ ಹಿರಿಯ ಸಾಹಿತಿ ಡಾ. ಬಿ.ಕೆ. ಮುನಿಸ್ವಾಮಿ ಉದ್ಘಾಟಿಸುವರು. ಐದು ರಾಜ್ಯದ ಬಹುಭಾಷಾ ಕವಿಗಳು ಕವನ ವಾಚಿಸಲಿರುವುದು ಈ ಗೋಷ್ಠಿಯ ವಿಶೇಷ ಎಂದು ಹೇಳಿದರು.ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ. ಅರುಣ್ ಯೋಗಿರಾಜ್ ಗೆ ಶಿಲ್ಪಸಿರಿ ಪ್ರಶಸ್ತಿಯನ್ನು ಮಂತ್ರಾಲಯದ ಪೀಠಾಧೀಶ ಸುಭುದೇಂದ್ರ ತೀರ್ಥರು ಪ್ರದಾನ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಪಟೇಲ್ ಪಾಂಡು,ಮದನ್ ಗೌಡರು ಸಾಹಿತ್ಯ ಸಿರಿ ಪ್ರಶಸ್ತಿಯನ್ನು ವಿಜಯಕುಮಾರ್ ಗೆ ಪ್ರದಾನ ಮಾಡಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ರಾಜ್ಯಗಳ ಸಾಧಕರನ್ನು ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಐದು ರಾಜ್ಯಗಳ ಅಧ್ಯಕ್ಷರು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಪಂಡಿತ ಕೇಸರಿ ಮಹಾ ಮಹೋಪಾಧ್ಯಾಯ ವಿದ್ವಾನ್ ಶ್ರೀ ಗಿರಿಯಾಚಾರ್ಯ ಹಾಗೂ ತಾರಾಮತಿ ಕುಲಕರ್ಣಿ ಮತ್ತು ಶೃಂಗೇರಿ ರಮೇಶ್ ಬೇಗಾರ್ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಕಸಾಪ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ವೀಣಾ, ಸಚಿನ್ ಸಿಂಗ್ ಇದ್ದರು.- 19 ಕೆಸಿಕೆಎಂ 1