ನವೆಂಬರ್ ತಿಂಗಳಲ್ಲಿ ಗುಬ್ಬಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Aug 20, 2025, 01:30 AM IST
ಗುಬ್ಬಿಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ  ನವಂಬರ್ ಮಾಹೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು. | Kannada Prabha

ಸಾರಾಂಶ

ಜೊತೆಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸ್ಥಳೀಯ ಸಾಹಿತಿಗಳಲ್ಲಿ ಅವರ ಅನುಭವ, ಸಾಹಿತ್ಯ ಕೃಷಿ ಪರಾಮರ್ಶೆ ನಡೆಸಿ ಅಂತಿಮ ಮೂವರ ಹೆಸರು ಜಿಲ್ಲಾ ಘಟಕಕ್ಕೆ ಕಳುಹಿಸುವ ಬಗ್ಗೆ ಜಿಲ್ಲಾಧ್ಯಕ್ಷರು ವಿವರಿಸಿ ಪರಿಷತ್ತಿನ ನಿಯಮವನ್ನು ಸಭೆಗೆ ತಿಳಿಸಿದರು.

ಕಸಾಪ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಕನ್ನಡಪ್ರಭ ವಾರ್ತೆ ಗುಬ್ಬಿ ತಾಲೂಕುಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ ನಲ್ಲಿ ಒಂದು ದಿನದ ಕಾರ್ಯಕ್ರಮವಾಗಿ ಅದ್ಧೂರಿಯಾಗಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಚರ್ಚಿಸಿ ಸಭೆಯಲ್ಲಿ ತೀರ್ಮಾನಿಸಿದರು.

ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಧ್ಯಕ್ಷತೆ ವಹಿಸಿ ಸಮ್ಮೇಳನದ ರೂಪುರೇಷೆಗಳನ್ನು ಸಾಹಿತ್ಯಾಸಕ್ತಿಗಳ ಜೊತೆ ಚರ್ಚಿಸಿ ಸಮ್ಮೇಳನವನ್ನು ಗುಬ್ಬಿ ಪಟ್ಟಣದಲ್ಲಿ ನಡೆಸಲು ಸಭೆಯಲ್ಲಿ ಸಮ್ಮತಿ ಪಡೆಯಲಾಯಿತು.

ಇಡೀ ಸಮ್ಮೇಳನದ ಅಂದಾಜು ಆಯವ್ಯಯ ಪಟ್ಟಿ ತಯಾರಿಸಲು ಸೂಚಿಸಿದ ಹಿನ್ನೆಲೆ 10 ಲಕ್ಷದ ಅಂದಾಜು ಪಟ್ಟಿ ಸ್ಥಳದಲ್ಲೇ ಸಿದ್ಧವಾಯಿತು. ಜನರನ್ನು ಹೆಚ್ಚು ಆಕರ್ಷಿಸುವುದು ಮೆರವಣಿಗೆ ಮತ್ತು ಊಟ ಉಪಹಾರ ವ್ಯವಸ್ಥೆ ಎಂಬ ವಿಚಾರ ಪ್ರಸ್ತಾಪವಾಗಿ ಅಚ್ಚುಕಟ್ಟಿನ ರುಚಿಕರ ಊಟದ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಬೆಳಗ್ಗೆ ಅದ್ಧೂರಿ ಮೆರವಣಿಗೆ ನಂತರ ಉದ್ಘಾಟನೆ, ಕವಿಗೋಷ್ಠಿ, ಸಂವಾದ ಕಾರ್ಯಕ್ರಮ ಕ್ರಮಬದ್ಧ ನಡೆಸಲು ತೀರ್ಮಾನಿಸಲಾಯಿತು.

ಜೊತೆಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸ್ಥಳೀಯ ಸಾಹಿತಿಗಳಲ್ಲಿ ಅವರ ಅನುಭವ, ಸಾಹಿತ್ಯ ಕೃಷಿ ಪರಾಮರ್ಶೆ ನಡೆಸಿ ಅಂತಿಮ ಮೂವರ ಹೆಸರು ಜಿಲ್ಲಾ ಘಟಕಕ್ಕೆ ಕಳುಹಿಸುವ ಬಗ್ಗೆ ಜಿಲ್ಲಾಧ್ಯಕ್ಷರು ವಿವರಿಸಿ ಪರಿಷತ್ತಿನ ನಿಯಮವನ್ನು ಸಭೆಗೆ ತಿಳಿಸಿದರು.

ಕಸಾಪ ರಾಜ್ಯ ಘಟಕದಿಂದ ಒಂದು ಲಕ್ಷ ರು. ಬರಲಿದೆ. ಆದರೆ ಸಮ್ಮೇಳನಕ್ಕೆ ಅಗತ್ಯ ಸಂಪನ್ಮೂಲ ಕ್ರೋಢೀಕರಣ ತಾಲೂಕಿನ ದಾನಿಗಳಿಂದ ಕಲೆ ಹಾಕಬೇಕಿದೆ. ಕನ್ನಡಾಭಿಮಾನಿಗಳು ಸಾಕಷ್ಟು ಮಂದಿ ಆರ್ಥಿಕ ನೆರವು ನೀಡುತ್ತಾರೆ. ಆದರೆ ಸಮ್ಮೇಳನಕ್ಕೆ ಸಾಧ್ಯವಾದಷ್ಟು ವಸ್ತು ರೂಪದಲ್ಲಿ ದಾನ ಸಂಗ್ರಹ ಮಾಡುವ ಬಗ್ಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೂಚಿಸಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಪ್ರತಿ ವಾರ ಸಭೆ ನಡೆಸಿ, ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಎಲ್ಲರೂ ಸಮ್ಮತಿ ವ್ಯಕ್ತಪಡಿಸಿದರು. ದಿನಾಂಕ ನಿಗದಿಗೆ ಶಾಸಕರನ್ನು ಹಾಗೂ ಸಂಸದರನ್ನು ಭೇಟಿ ಮಾಡಿ ಸಮ್ಮೇಳನದ ವಿಚಾರ ತಿಳಿಸಿ, ಹಲವು ಸಮಿತಿ ರಚನೆ ಹಾಗೂ ಸಂಪನ್ಮೂಲ ಕ್ರೋಢೀಕರಣ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಜಿ.ಆರ್.ಶಿವಕುಮಾರ್, ಶಶಿಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಯತೀಶ್, ಗುಬ್ಬಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ, ಸಿ.ಆರ್.ಶಂಕರ್ ಕುಮಾರ್, ಸಲೀಂ ಪಾಷ, ನಿವೃತ್ತ ಪ್ರಾಚಾರ್ಯ ಜಿ.ಬಿ.ಮಲ್ಲಪ್ಪ, ಕಸಾಪ ಮಾಜಿ ಅಧ್ಯಕ್ಷರಾದ ರಾಜೇಶ್ ಗುಬ್ಬಿ, ಶಾಂತರಾಜು, ರಾಜ್ ಕುಮಾರ್ ಅಭಿಮಾನಿಗಳ ಸಂಘದ ಗೋಪಾಲ್ ಅರಸ್, ಪತಂಜಲಿ ಯೋಗ ಸಮಿತಿ ಬಸವರಾಜ್, ಕಸಾಪ ಪದಾಧಿಕಾರಿಗಳಾದ ರಾಜಶೇಖರ್, ಬೆಳ್ಳಾವಿ ಶಿವಕುಮಾರ್, ಕೆ.ಎಂ.ರವೀಶ್, ಕುಮಾರಸ್ವಾಮಿ, ಜಯಣ್ಣ, ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರೇಣುಕಾ ಪ್ರಸಾದ್ ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ