ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಪರಿಸರ ಸ್ನೇಹಿ, ಸೌಹಾರ್ದತೆ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಕಿವಿಮಾತು ಹೇಳಿದರು.ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಆಚರಣೆ ಸಂಬಂಧ ಸೌಹಾರ್ದತೆ ಸಭೆ ನಡೆಸಿ, ಹಬ್ಬಗಳ ಆಚರಣೆಗೆ ಸರ್ಕಾರದ ಆದೇಶದಂತೆ ನಿಯಮ ಹಾಗೂ ಮಾರ್ಗದರ್ಶನಗಳಿರುತ್ತದೆ. ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಿದರು. ಹೈಕೋರ್ಟ್ ಆದೇಶದಂತೆ ಪ್ಲಾಸ್ಟರ್ ಆಪ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣ ಲೇಪಿತ ಗಣಪತಿ ನೀರಿನಲ್ಲಿ ವಿಸರ್ಜನೆ ಮಾಡುವಂತಿಲ್ಲ. ಜೇಡಿ ಮಣ್ಣಿನಲ್ಲಿ ನಿರ್ಮಾಣ ಮಾಡಿರುವ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಬೇಕು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಅನುಮತಿ ನೀಡಲಾಗುತ್ತಿದೆ. ಅರ್ಜಿಯಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳ ಹಾಗೂ ದಿನಾಂಕವನ್ನು ನಮೂದಿಸುವುದು ಕಡ್ಡಾಯ. ಪ್ಲಾಸ್ಟಿಕ್ ವಸ್ತು ಅಲಂಕಾರಕ್ಕೆ ಬಳಸಬಾರದು ಎಂದು ಮನವಿ ಮಾಡಿದರು.ಹಬ್ಬಗಳನ್ನು ಕೋಮುಗಲಭೆ, ಅಹಿತಕರ ಘಟನೆಗಳಿಗೆ ಅವಕಾಶ ಕೊಡದೇ ಶಾಂತಿಯುತ, ಪರಸ್ಪರ ಹಾಗೂ ಪ್ರತಿಯೊಬ್ಬರ ಸಹಭಾಗಿತ್ವದಲ್ಲಿ ಆಚರಿಸಬೇಕು. ಹೆಚ್ಚಿನ ಶಬ್ಧ ಮಾಡುವ ಧ್ವನಿವರ್ಧಕ ಬಳಕೆ ಬೇಡ ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಪ್ರಮುಖ ಧಾರ್ಮಿಕ ಹಬ್ಬ ಆಗಿರುವುದರಿಂದ ಧರ್ಮಗಳಲ್ಲಿ ಬೇಧ-ಭಾವ ಮಾಡದೆ ಸಹಕಾರದಿಂದ ಹಬ್ಬ ಆಚರಣೆ ಮಾಡಬೇಕು. ಗಣಪತಿ ವಿಸರ್ಜನೆಗೆ ನಗರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸುವ ಸ್ಥಳದಲ್ಲಿ ವಿಸರ್ಜಿಸಿ ಎಂದರು.ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹಬ್ಬಗಳ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಅನುಮತಿ ಇಲ್ಲದ ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಮೆರವಣಿಗೆ ಹೋಗುವ ರೂಟ್ ಮ್ಯಾಪ್ ನ್ನು ಪೊಲೀಸ್ ಇಲಾಖೆಗೆ ಒದಗಿಸಬೇಕು. ಕೆಲವು ವಿವಾದಾತ್ಮಕ ಸ್ಥಳಗಳಿವೆ. ಆ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪಿಸುವ ಬದಲು ಬೇರೆ ಸ್ಥಳ ಆಯ್ಕೆ ಮಾಡುವಂತೆ ಸೂಚಿಸಿದರು.
ಸಾರ್ವಜನಿಕವಾಗಿ ಇಡಲಾಗುವ ಗಣೇಶ ಮೂರ್ತಿಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿ ಪಡೆದ ನಂತರವೇ ಸ್ಥಾಪಿಸುವುದು. ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸುವುದು ಹಾಗೂ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕಗಳ ಬಳಕೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಗಂಗಾಧರಸ್ವಾಮಿ ಸೇರಿದಂತೆ ಪೊಲೀಸರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.