ಶಾಂತಿ, ಸಾಮರಸ್ಯದಿಂದ ಹೋಳಿ ಆಚರಿಸಿ: ಸಿಪಿಐ ಮಹಾಂತೇಶ ಲಂಬಿ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ಹಬ್ಬಗಳು ಸೌಹಾರ್ದತೆಗಳ ಸಂಕೇತವಾಗಬೇಕು.

ಬ್ಯಾಡಗಿ: ಹೋಳಿ ಹಬ್ಬದಾಚರಣೆಗೆ ಮುಕ್ತವಾದ ಅವಕಾಶ ನೀಡುತ್ತೇವೆ. ಶಾಂತಿಯುತವಾಗಿ ಸಾಮರಸ್ಯದೊಂದಿಗೆ ಹಬ್ಬದಾಚರಣೆಯಲ್ಲಿ ತೊಡಗಬೇಕು. ಇದನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವಂತಹ ಕೆಲಸಗಳನ್ನು ಕೈಗೊಂಡಲ್ಲಿ ಅಂಥವರ ವಿರುದ್ಧ ಕ್ರಮ ಅನಿವಾರ್ಯ ಎಂದು ಸಿಪಿಐ ಮಹಾಂತೇಶ ಲಂಬಿ ಎಚ್ಚರಿಸಿದರು.

ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್ ಹಾಗೂ ಹೋಳಿ ಹಬ್ಬದಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಹಬ್ಬಗಳು ಸೌಹಾರ್ದತೆಗಳ ಸಂಕೇತವಾಗಬೇಕು. ಪಟ್ಟಣದಲ್ಲಿ ಹಿಂದಿನಿಂದಲೂ ಹೋಳಿ ಹಬ್ಬದಂಗವಾಗಿ ನಡೆಯುವ ಬಣ್ಣದೋಕುಳಿ ಕಾರ್ಯಕ್ರಮಗಳು ನಿರಾತಂಕವಾಗಿ ಸಾಗಿ ಬಂದಿವೆ. ಯಾವುದೇ ಅಹಿತಕರ ಘಟನೆಗಳು ನಡೆದ ಉದಾಹರಣೆಗಳಿಲ್ಲ. ಹೀಗಾಗಿ ಪ್ರಸಕ್ತ ವರ್ಷವೂ ಸಾರ್ವಜನಿಕರಿಂದ ಅದನ್ನೇ ನಿರೀಕ್ಷಿಸುತ್ತೇವೆ ಎಂದರು.

ಹಿರಿಯರು ಜವಾಬ್ದಾರಿ ತೆಗೆದುಕೊಳ್ಳಿ: ಯಾವುದೇ ಘಟನೆ ಸಂದರ್ಭದಲ್ಲಿ ಆಯಾ ಸಮಾಜದ ಹಿರಿಯರು ತಮ್ಮ ಸಮಾಜದ ಯುವಕರನ್ನು ನಿಯಂತ್ರಿಸಿದರೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಪಟ್ಟಣದ ಹಿತಕ್ಕಾಗಿ ಮತ್ತು ಹಬ್ಬದಾಚರಣೆ ಸರಾಗವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು. ನಾವು ತೆಗೆದುಕೊಳ್ಳುವಂತಹ ನಿರ್ಧಾರಗಳಿಗೆ ಸಾರ್ವಜನಿಕರ ಸಹಕಾರವನ್ನು ಕೋರಿದರು.

ಮಾ. 19ರಂದು ಬಣ್ಣದೋಕುಳಿ: ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹುಣ್ಣಿಮೆ ಮುಗಿದ 5 ದಿನಕ್ಕೆ ಹಬ್ಬದೋಕುಳಿ ನಡೆಯಲಿದೆ. ಮಾ. 18ರಂದು ರಂಗಪಂಚಮಿಯಾಗಲಿದೆ. ಆದರೆ ಯಾವುದೇ ಮಂಗಳವಾರ ಕಾಮದಹನಕ್ಕೆ ಅವಕಾಶವಿಲ್ಲ. ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಹೀಗಾಗಿ ಮಾ. 19ರಂದು ಬಣ್ಣದೋಕುಳಿ ನಡೆಸಲು ಗ್ರಾಮದ ಹಿರಿಯರು ನಿರ್ಧರಿಸಿದ್ದು, ಎಲ್ಲ ಸಮಾಜದವರು ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಮುಖಂಡರಾದ ಶಿವಾನಂದ ಯಮನಕ್ಕನವರ, ಸುರೇಶ ಅಸಾದಿ, ಅಂಜುಮನ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಮುಕ್ತಿಯಾರ ಮುಲ್ಲಾ ಪಿಎಸ್ಐ ಅರವಿಂದ, ಎನ್.ಕೆ. ನಿಂಗೇನಹಳ್ಳಿ ಇತರರು ಉಪಸ್ಥಿತರಿದ್ದರು.

ನಾಗನೂರ ಕೆರೆಗೆ ಬಂದ ಕಾಡಾನೆಗಳು

ಶಿಗ್ಗಾಂವಿ: ಪಟ್ಟಣದ ನಾಗನೂರ ಕೆರೆಗೆ ಎರಡು ಆನೆಗಳು ಬಂದಿದ್ದು, ತಕ್ಷಣ ಆನೆಗಳನ್ನು ಕಾಡಿಗೆ ಓಡಿಸಬೇಕು ಎಂದು ತಾಲೂಕಿನ ಸಾರ್ವಜನಿಕರು, ರೈತರು ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಎರಡು ಗಂಡು ಆನೆಗಳು ನಾಗನೂರು ಕೆರೆಯಲ್ಲಿ ಕಂಡುಬಂದಿದ್ದು, ಅಲ್ಲಲ್ಲಿ ಹೊಲಗಳಿಗೆ ನುಗ್ಗಿದ್ದು, ಕೆಲವೆಡೆ ಬೆಳೆಹಾನಿ ಮಾಡಿವೆ. ಅರಣ್ಯ ಇಲಾಖೆ ಕೂಡಲೇ ತಕ್ಷಣ ಸಿಬ್ಬಂದಿಯೊಂದಿಗೆ ಪರಿಶೀಲನೆ ಮಾಡಿದ್ದಾರೆ. ಆದರೆ ಆನೆಗಳು ಪತ್ತೆಯಾಗಿಲ್ಲ.

ಜನರು ಭಯಪಡುವ ಅಗತ್ಯವಿಲ್ಲ. ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆವವರೂ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದರೆ ಸಹಾಯಕ್ಕೆ ಸಿಬ್ಬಂದಿ ಕಳಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Share this article