ಪಂಚ ಗ್ಯಾರಂಟಿ ಸೌಲಭ್ಯಗಳು ಜನರಿಗೆ ತಲುಪಿಸಿ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ಪಂಚ ಗ್ಯಾರಂಟಿಗಳು ಜನಸಾಮಾನ್ಯರಿಗೆ ಸಮಗ್ರವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆ ಸೇರಿದಂತೆ ಪ್ರತಿ ತಾಲೂಕಿನಲ್ಲಿ ಗ್ಯಾರಂಟಿ ಕಚೇರಿ ತೆರೆದು ಕುಂದುಕೊರತೆ ಮತ್ತು ಸೌಲಭ್ಯ ತಲುಪಿಸುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪಂಚ ಗ್ಯಾರಂಟಿಗಳು ಜನಸಾಮಾನ್ಯರಿಗೆ ಸಮಗ್ರವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆ ಸೇರಿದಂತೆ ಪ್ರತಿ ತಾಲೂಕಿನಲ್ಲಿ ಗ್ಯಾರಂಟಿ ಕಚೇರಿ ತೆರೆದು ಕುಂದುಕೊರತೆ ಮತ್ತು ಸೌಲಭ್ಯ ತಲುಪಿಸುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ನವೀಕೃತ ಕಚೇರಿಯಲ್ಲಿ ಪೂಜಾ ನೆರವೇರಿಸಿ ಮಾತನಾಡಿದರು.

ವಿಶೇಷವಾಗಿ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಶಕ್ತಿ, ಗೃಹಲಕ್ಷ್ಮಿ ಯೋಜನೆ ರೂಪಿಸಿ ಮಹಿಳಾ ಸಬಲೀಕರಣಕ್ಕೆ ಕೈಜೋಡಿಸಿದೆ. ಪ್ರಸ್ತುತ ಗೃಹಲಕ್ಷ್ಮಿ ಹಣದಿಂದ ಹಲವು ಕುಟುಂಬಗಳು ವೈಯಕ್ತಿಕ ಖರ್ಚು, ಮನೆಗಳಿಗೆ ಉಪಯೋಗಿ ವಸ್ತುಗಳನ್ನು ಖರೀದಿಸಿ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡಿವೆ ಎಂದರು.

ರಾಜ್ಯ ಸರ್ಕಾರ ಜಾತಿ ಧರ್ಮ, ಮೇಲು ಕೀಳು ಎಂಬ ತಾರತಮ್ಯ ಮಾಡದೆ ಪ್ರತಿ ಕುಟುಂಬಕ್ಕೆ ಯೋಜನೆ ಕಲ್ಪಿಸಿದೆ. ಕೆಲವೇ ಕುಟುಂಬಗಳು ಆಧಾರ ತೆರಿಗೆ ಭರಿಸುವ ಹಾಗೂ ಇನ್ನಿತರೆ ದಾಖಲಾತಿಗಳ ವ್ಯತ್ಯಾಸದಿಂದ ಸೌಲಭ್ಯ ದೊರಕಿಲ್ಲ. ಹೀಗಾಗಿ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳು ಪರಿಶೀಲಿಸಿ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಬಡವರು ಸೇರಿದಂತೆ ಸರ್ವ ಸಮಾಜಕ್ಕೂ ಪಂಚ ಗ್ಯಾರಂಟಿ ಯೋಜನೆಗಳು ಉಪಯೋಗವಾಗಿವೆ. ಹೀಗಾಗಿ ರಾಜ್ಯಾದ್ಯಂತ ಜಿಲ್ಲೆ ಗ್ಯಾರಂಟಿ ಯೋಜನೆ ಸದ್ಬಳಕೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ಈ ಹಿಂದೆ ಕಚೇರಿಯನ್ನು ತಾತ್ಕಾಲಿಕವಾಗಿ ಜಿಲ್ಲಾ ಪಂಚಾಯ್ತಿ ಕಟ್ಟಡದ ಸ್ಥಾಯಿ ಸಮಿತಿ ಕೊಠಡಿಯಲ್ಲಿತ್ತು. ಇದೀಗ ಸಿಇಓ ಸಹಕಾರದಿಂದ ಮೂರನೇ ಮಹಡಿಯಲ್ಲಿ ಮಿನಿ ಸಭಾಂಗಣ, ಅಧ್ಯಕ್ಷ ಕಚೇರಿ ಒಳಗೊಂಡಿರುವ ಸಕಲ ಸೌಲಭ್ಯಗಳಿಂದ ಕೂಡಿರುವ ನವೀಕರಣ ಕಚೇರಿ ತೆರೆಯಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಉಪ ಕಾರ್ಯದರ್ಶಿ ಶಂಕರ್ ಕೊರವರ್, ಮುಖ್ಯ ಯೋಜನಾಧಿಕಾರಿ ರಾಜ್‌ಗೋಪಾಲ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಎನ್.ಮಂಜುನಾಥ್, ಸದಸ್ಯರಾದ ಆರ್.ಎಂ.ಬಸವರಾಜ್, ಮಲ್ಲೇಶಸ್ವಾಮಿ, ರಾಜು, ಕಲ್ಲೇಶ್ ಉಪಸ್ಥಿತರಿದ್ದರು.

Share this article