ವಾರಕ್ಕೊಮ್ಮೆ ಸೋಳ್ಳೆ ಉತ್ಪತ್ತಿ ತಾಣ ನಾಶ ದಿನ ಆಚರಿಸಿ

KannadaprabhaNewsNetwork | Published : Jun 30, 2024 12:51 AM

ಸಾರಾಂಶ

ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು ಎಲ್ಲಾ ಕಡೆಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಾದ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯ, ಮೆದುಳುಜ್ವರ ಮತ್ತು ಆನೆಕಾಲುರೋಗ ಹರಡುವ ಸಾಧ್ಯತೆ ಇರುತ್ತದೆ. ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಡೆಂಘೀ ಜ್ವರ ನಿಯಂತ್ರಿಸಲು ಜನತೆಯ ಸಹಕಾರ ಅಗತ್ಯ. ಪ್ರತಿ ಶುಕ್ರವಾರ ನಗರ, ಗ್ರಾಮೀಣ ಪ್ರದೇಶದಲ್ಲಿ ಈ ಮಾರಕ ಕಾಯಿಲೆಗೆ ಕಾರಣವಾದ ಈಡೀಸ್ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ನಾಶಪಡಿಸುವ ದಿನವನ್ನಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ‘ಡೆಂಘಿ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ವಾರಕ್ಕೊಂದು ದಿನ ಪ್ರತಿ ಶುಕ್ರವಾರ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನವಾಗಿಸೋಣ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡೆಂಘೀ ಸಾಂಕ್ರಾಮಿಕ ರೋಗ

ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು ಎಲ್ಲಾ ಕಡೆಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಾದ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯ, ಮೆದುಳುಜ್ವರ ಮತ್ತು ಆನೆಕಾಲುರೋಗ ಹರಡುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ರೋಗಗಳು ಸೊಳ್ಳೆಗಳಿಂದ ಹರಡುವಂತಹ ಖಾಯಿಲೆಗಳು. ಮುಖ್ಯವಾಗಿ ಡೆಂಘೀ ಮತ್ತು ಚಿಕೂನ್ ಗುನ್ಯಾ ಸಹ ಒಂದು ಸಾಂಕ್ರಮಿಕ ರೋಗ, ಸೋಂಕಿತ ಈಡೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತದೆ ಎಂದು ತಿಳಿಸಿದರು.ಡೆಂಘೀ ಮತ್ತು ಚಿಕೂನ್‌ಗುನ್ಯಾ ಹರಡುವ ಈಡೀಸ್ ಸೊಳ್ಳೆಯು ಪ್ರತಿ ದಿನ ಬಳಸುವಂತಹ ನೀರಿನ ತೊಟ್ಟಿ ಡ್ರಂಗಳಲ್ಲಿ ಮತ್ತು ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ. ಆದುದರಿಂದ ದಿನ ಬಳಕೆಯ ತೊಟ್ಟಿ ಮತ್ತು ಡ್ರಂಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಿ ಒಣ ದಿನ ಎಂದು ಆಚರಿಸಬೇಕು. ನಂತರ ನೀರು ತುಂಬಿಸಿ ಮುಚ್ಚಿಡುವುದು, ಮನೆಯ ಸುತ್ತಮುತ್ತ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಕ್ರಮಕೈಗೊಳ್ಳುವುದು.ರಾಜ್ಯದಲ್ಲಿ ಡೇಂಘೀ ಹೆಚ್ಚಳ

ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು, ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ರೋಗ ಪ್ರಸರಣವು ಇನ್ನೂ ಹೆಚ್ಚುವ ಸಾಧ್ಯತೆ ಇರುತ್ತದೆ. ಡೆಂಘಿ ಜ್ವರ ನಿಯಂತ್ರಣ ಕಾರ್ಯಕ್ರಮ ಆರೋಗ್ಯ ಇಲಾಖೆಯು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತಿದ್ದರೂ ಸಹ ಇತರೆ ಇಲಾಖೆಗಳು ಹಾಗೂ ಸಾರ್ವಜನಿಕರ ಪೂರ್ಣ ಸಹಕಾರದೊಂದಿಗೆ ಡೆಂಘೀ ಜ್ವರ ನಿಯಂತ್ರಣ ಸಾಧ್ಯ, ಎಲ್ಲಾ ಇಲಾಖೆಗಳು ಸಹಕಾರ ನೀಡಲು ಸೂಚಿಸಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಪ್ರತಿ ಶುಕ್ರವಾರ ಈಡೀಸ್ ಸೊಳ್ಳೆ ನಿರ್ಮೂಲನಾ ದಿನ’ ಈ ಹಿನ್ನಲೆಯಲ್ಲಿ ಪ್ರತಿ ಶುಕ್ರವಾರ ಸಾರ್ವಜನಿಕರು ಸ್ವತಹ ತಮ್ಮ ಮನೆಗಳು, ಕಚೇರಿಗಳು, ಶಾಲಾ ಕಾಲೇಜುಗಳು, ಇತ್ಯಾದಿಗಳಲ್ಲಿ ನೀರು ತುಂಬುವ ಪರಿಕರಗಳನ್ನುಸ್ವಚ್ಛಗೊಳಿಸುವುದು. ಸೊಳ್ಳೆಗಳ ಉತ್ಪತ್ತಿ ತಾಣ ನಾಶಪಡಿಸಬೇಕು ಎಂದರು.ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನೆ

ಆರೋಗ್ಯ ಇಲಾಖೆ ಡೆಂಘೀ ಜ್ವರ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ಸಾರ್ವಜನಿಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ, ಪ್ರತಿ ಗುರುವಾರ ಲಸಿಕಾ ದಿನವಾಗಿರುವಂತೆ ಪ್ರತಿ ಶುಕ್ರವಾರ ಈಡೀಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸುವುದನ್ನು ಸಾರ್ವಜನಿಕರು ದಿನಚರಿಯ ದೈನಂದಿನ ಅಭ್ಯಾಸ/ಪದ್ದತಿಯನ್ನಾಗಿ ಮಾಡುವುದರ ಮೂಲಕ ವರ್ತನೆಯಲ್ಲಿ ಶಾಶ್ವತ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಈ ಚಟುವಟಿಕೆಯನ್ನು ಅಭಿಯಾನದಂತೆ ಅನುಷ್ಠಾನಗೊಳಿಸಲು ತಿಳಿಸಿದರು. ಅದೇ ರೀತಿ ಸಾರ್ವಜನಿಕರಿಗೆ ತಮ್ಮ ಮನೆಯ ಒಳಗಡೆ ಹಾಗೂ ಹೊರಗಡೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಪ್ರತಿ ಶುಕ್ರವಾರದಂದು ನೀರಿನ ತಾಣಗಳನ್ನು ಸ್ವಚ್ಚಗೊಳಿಸಿ ಡೆಂಘೀ ನಿಯಂತ್ರಣ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕುಷ್ಠರೋಗ ನಿವಾರಣಾಧಿಕಾರಿ ಡಾ. ಎನ್.ಸಿ.ನಾರಾಯಣಸ್ವಾಮಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಪ್ರೇಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ರೇಣುಕಾದೇವಿ, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಇಲಾಖೆಯ ಮಹೇಶ್, ರಘು ಇದ್ದರು.

Share this article