ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ರೈತರ ಹಿತವನ್ನು ಸಂಪೂರ್ಣ ಕಡೆಗಣಿಸಿವೆ. ಅನ್ನದಾತರನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಪ್ರತಿಯೊಂದು ಹಂತದಲ್ಲೂ ರೈತರ ಬೇಡಿಕೆ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಜಾರಿಗೊಳಿಸುವ ಬಗ್ಗೆ ಎರಡೂ ಸರ್ಕಾರಗಳು ಮೊಸಳೆ ಕಣ್ಣಿರು ಸುರಿಸುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ.ಬಣ) ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಆರೋಪಿಸಿದರು.ಅವರು, ನಗರದ ನೆಹರೂ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ೫ ದಶಕಗಳಿಂದ ಬರಡುಸೀಮೆಯ ಬಯಲು ನಾಡಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಬೇಕೆಂದು ರೈತ ಸಂಘ ಒತ್ತಾಯಿಸುತ್ತಾ ಬಂದಿದೆ. ಆದರೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದರೂ ಅದಕ್ಕೆ ಸಮಪರ್ಕವಾಗಿ ಹಣ ನೀಡದೆ ಮೀನಾಮೇಷ ಎಣಿಸುತ್ತಿವೆ. ಕೇಂದ್ರ ಸರ್ಕಾರ ಈ ಕೂಡಲೇ ₹೫೩೦೦ ಕೋಟಿ ಹಣ ಬಿಡುಗಡೆ ಮಾಡಬೇಕು.
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ನೀಡಬೇಕಾದ ಬೆಳೆವಿಮೆ, ಪರಿಹಾರ ವಿತರಣೆ ಮಾಡುತ್ತಿಲ್ಲ, ತಾಲೂಕಿನಾದ್ಯಂತ ಸಾವಿರಾರು ರೈತರಿಗೆ ಸರ್ಕಾರ ಇಲಾಖೆ ಅಧಿಕಾರಿಗಳು ಮಾಡಿದ ಲೋಪದಿಂದ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ವಿಶೇಷವಾಗಿ ರೈತರ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶ, ವಿದ್ಯುತ್ ದರ ಏರಿಸುವ ಮೂಲಕ ರಾಜ್ಯ ಸರ್ಕಾರ ಬಡ ರೈತರ ಮೇಲೆ ದಾಳಿ ನಡೆಸುತ್ತಿದೆ. ಆದ್ದರಿಂದ, ರೈತರು ಸಂಘಟಿತರಾಗಿ ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರೆ ಸರ್ಕಾರ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.ಜಿಲ್ಲಾ ಕಿಸಾನ್ ಸೇಲ್ ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯದಲ್ಲಿ ವಿಭಿನ್ನ ಪಕ್ಷದ ಸರ್ಕಾರಗಳಿದ್ದರೂ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ, ಕೇಂದ್ರ ಸರ್ಕಾರವೂ ಸಹ ರೈತರಿಗೆ ಹೊಸ ಯೋಜನೆ ರೂಪಿಸುತ್ತಿಲ್ಲ, ರಾಜ್ಯ ಸರ್ಕಾರ ರೈತರಿಗೆ ಕೊಡುವ ಹಣವನ್ನೇ ನೀಡುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು. ಕರ್ನಾಟಕ ರಾಷ್ಟ್ರೀಯ ಪಕ್ಷದ ಮುಖಂಡ ನಗರಂಗೆರೆ ಮಹೇಶ್, ಬೋಜರಾಜ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ರೇಹಾನ್ ಪಾಷ ತಮ್ಮ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕಳಿಸುವ ಭರವಸೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ಭದ್ರಾಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಪರಿವರ್ತನೆಯಾಗಬೇಕು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು, ೯ ಬೇಡಿಕೆಗಳ ಬಗ್ಗೆ ಮನವಿ ಅರ್ಪಿಸಿರುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ಬಸವರಾಜು, ತಿಪ್ಪೇಸ್ವಾಮಿಗೌಡ, ರಾಜಣ್ಣ, ಎಚ್.ಚಂದ್ರಣ್ಣ, ಜಯಣ್ಣ, ರ‍್ರಿಸ್ವಾಮಿ, ಬುಡ್ನಹಟ್ಟಿ ತಿಪ್ಪೇಸ್ವಾಮಿ, ಪಿ.ನಾಗರಾಜು, ಆರ್.ಗುರುಮೂರ್ತಿ, ಈರಣ್ಣ, ರತ್ನಮ್ಮ, ಶಿವಮ್ಮ, ನಿರ್ಮಲ, ಓಬಮ್ಮ, ಪಾಪಮ್ಮ ಭಾಗವಹಿಸಿದ್ದರು.