ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿರುತ್ತದೆ ಎಂದು ಹೇಳಿದರು.
ಆಯಾ ಸಮಿತಿಗಳಿಗೆ ವಹಿಸಿದ ಕಾರ್ಯವನ್ನು ವಿಶೇಷ ಆಸಕ್ತಿಯಿಂದ ನಿರ್ವಹಿಸಬೇಕು. ಪ್ರತಿ ವರ್ಷದಂತೆ ಈ ವರ್ಷವು ಕೂಡ ಕನ್ನಡ ರಾಜ್ಯೋತ್ಸವದ ಹಿಂದಿನ ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಿಗಳಲ್ಲಿ ಸ್ವಚ್ಛತೆ, ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಅಂದು ಬೆಳಗ್ಗೆ 7.45ಕ್ಕೆ ಸರ್ಕಾರಿ ಅರೆ ಸರ್ಕಾರಿ ಹಾಗೂ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣ ಮಾಡಿ, ಎಲ್ಲಾ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಎಲ್ಲಾ ಶಾಲಾ ಕಾಲೇಜು ಮಕ್ಕಳೊಂದಿಗೆ ಬೆಳಗ್ಗೆ 7.50ಕ್ಕೆ ಬಸವೇಶ್ವರ ವೃತ್ತದಲ್ಲಿ ಸೇರುವುದು ನಂತರ ಬೆಳಗ್ಗೆ 8 ಗಂಟೆಗೆ ತಾಯಿ ಭುವನೇಶ್ವರಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭಿಸಲಾಗುವುದು.
ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ ಹೋಮ್ ಗಾರ್ಡ ಇನ್ನಿತರ ಇಲಾಖೆಯಿಂದ ಪರೇಡ್ ನಡೆಸಲು ಕ್ರಮ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಣಿತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ ಎಂದರು.
ನ.1ರಂದು ಹಲ್ಮಡಿ ಶಾಸನ ಪ್ರತಿಕೃತಿ ಸ್ತಂಭವನ್ನು ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನಾವರಣಗೊಳಿಸಲಾಗುವುದು. ಅ.28ರಂದು ಕಾವ್ಯ ಕುಂಚ ಗಾಯನ, ಅ.29ರಂದು ಕವಿ ಸಮ್ಮೇಳನ ಕವಿಗೋಷ್ಠಿ, 30ರಂದು ಜಾನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಯಿತು.