ರಂಜಾನ್, ಹೋಳಿ ಸೌಹಾರ್ದತೆಯಿಂದ ಆಚರಿಸಿ

KannadaprabhaNewsNetwork |  
Published : Mar 10, 2025, 12:17 AM IST
ಕಾಗವಾಡದ ಶಿರಗುಪ್ಪಿಯಲ್ಲಿ ನಡೆದ ಶಾಂತಿಪಾಲನ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮಾತನಾಡಿದರು. ಎಸ್ಪಿ ಡಾ.ಭೀಮಾಶಂಕ ಗುಳೇದ, ತಹಸೀಲ್ದಾರ್‌ ರಾಜೇಶ ಬುರ್ಲಿ ಇದ್ದರು. | Kannada Prabha

ಸಾರಾಂಶ

ರಂಜಾನ್ ಹಾಗೂ ಹೋಳಿ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆ, ಶಾಂತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದು ಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ರಂಜಾನ್ ಹಾಗೂ ಹೋಳಿ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆ, ಶಾಂತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದು ಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹೇಳಿದರು.

ತಾಲೂಕಿನ ಶಿರುಗುಪ್ಪಿ ಗ್ರಾಪಂ ಸಭಾಭವನದಲ್ಲಿ ನಡೆದ ಕಾಗವಾಡ ತಾಲೂಕು ಮಟ್ಟದ ಶಾಂತಿಪಾಲನೆ ಸಭೆ ಮತ್ತು ಎಸ್ಸಿ/ಎಸ್ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಕಾಗವಾಡ ತಾಲೂಕಿನಲ್ಲಿ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದ್ದು ಸಂತಸದ ವಿಷಯವಾಗಿದೆ. ಮುಂದೆಯೂ ಇದೇ ರೀತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ ಎಂದರು.

ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣನ ದಹನದ ವೇಳೆ ಚಿಕ್ಕ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ಬಣ್ಣ ಆಡುವಾಗ ನೈಸರ್ಗಿಕ ಬಣ್ಣದ ಉಪಯೋಗ ಮಾಡಿ, ಕಣ್ಣುಗಳ ಬಗ್ಗೆ ಎಚ್ಚರಿಕೆ ವಹಿಸಿರಿ. ತಾಲೂಕಿನಲ್ಲಿ ಸೌಹಾರ್ದತೆ ಮನೆ ಮಾಡಿದ್ದು, ಇಲ್ಲಿಯ ವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಮುಂದೆಯೂ ಇದೇ ರೀತಿ ಎಲ್ಲಾ ಹಬ್ಬ ಹರಿದಿನಗಳನ್ನು ಒಟ್ಟಿಗೆ ಸೌಹಾರ್ದತೆಯಿಂದ ಆಚರಿಸಿ ಎಂದರು.

ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ಈಗ ಕರೆದಿರುವ ಶಾಂತಿಪಾಲನ ಸಭೆಯಲ್ಲಿ ಎಸ್ಸಿ ಸಮುದಾಯದ ಕುಂದು ಕೊರತೆಗಳ ಕುರಿತು ಚರ್ಚಿಸುವುದು ಬೇಡ. ಅದಕ್ಕಾಗಿ ಮುಂದೊಂದು ದಿನ ಪ್ರತ್ಯೇಕ ಸಭೆ ನಡೆಸಿ ಎಂದು ಸಲಹೆ ನೀಡಿದರು. ಅದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿ, ಮುಂದಿನ ದಿನಗಳಲ್ಲಿ ಸಮುದಾಯದವರ ಕುಂದುಕೊರತೆ ಪಾಲನೆ ಸಭೆ ಪ್ರತ್ಯೇಕವಾಗಿ ಕರೆಯಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅನೇಕ ಮುಖಂಡರು ತಮ್ಮ ಅನಿಸಿಕೆ ಹಂಚಿಕೊಂಡರು. ತಹಸೀಲ್ದಾರ್‌ ರಾಜೇಶ ಬುರ್ಲಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಶ ಹಳ್ಳೂರ, ಶಿರಗುಪ್ಪಿ ಗ್ರಾಪಂ ಅಧ್ಯಕ್ಷೆ ಶೋಭಾ ಗದಾಳೆ, ಉಪಾಧ್ಯಕ್ಷ ರಾಮಗೌಡಾ ಪಾಟೀಲ, ಅಬಕಾರಿ ಅಧಿಕಾರಿ ಮಹಾಂತೇಶ ಬಂಡಗಾರ, ಕಾಗವಾಡ ಪಿಎಸ್‌ಐ ಬಸನಗೌಡಾ ಬಿರಾದರ, ಅಣ್ಣಾಸಾಬ ಕೋರೆ, ಎಸ್.ಡಿ. ಮುಲ್ಲಾ, ಪಿಡಿಒ ಶಿಲ್ಪಾ ನಾಯಿಕವಾಡಿ, ಗ್ರಾಮಾಡಳಿತಾಧಿಕಾರಿ ಸುನೀಲ ಕಾಂಬಳೆ, ಮುಖಂಡರಾದ ವಿಜಯ ಅಕಿವಾಟೆ, ಈರಗೌಡಾ ಪಾಟೀಲ, ಈಶ್ವರ ಕಾಂಬಳೆ, ಸಚೀನ ಕಾಂಬಳೆ, ರಮೇಶ ಕಾಂಬಳೆ, ಗೌತಮ ಜತ್ರಾಟೆ, ರವಿ ಕುರಣೆ, ಇಕಬಾಲ ಕನವಾಡೆ, ಮಸ್ತಾನ ಕನವಾಡೆ, ರಾಜು ಪವಾರ ಸೇರಿದಂತೆ ತಾಲೂಕು ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ದಲಿತ ಮುಖಂಡರು, ಹಿಂದೂ-ಮುಸ್ಲಿಂ ಬಾಂಧವರು ಮತ್ತು ಗ್ರಾಮಸ್ಥರು ಇದ್ದರು.

-----

ಬಾಕ್ಸ್.... ಗುಣಮಟ್ಟದ ಮೊಟ್ಟೆ ಪೂರೈಕೆಗೆ ಸೂಚನೆತಾಲೂಕಿನ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಕಳಪೆ ಮಟ್ಟದ ಮೊಟ್ಟೆ ಪೂರೈಕೆ ಮಾಡುತ್ತಿರುವ ಕುರಿತು ಬಿಇಒ ರವರು ಫೋಟೋ ಸಮೇತ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆದು, ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಕೂಡಲೇ ಸ್ಪಂದಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು, ಉತ್ತಮ ಗುಣಮಟ್ಟದ ಮೊಟ್ಟೆ ಪೂರೈಕೆ ಮಾಡಲಾಗುವುದು ಎಂದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ