ಕನ್ನಡಪ್ರಭ ವಾರ್ತೆ ಹಿರಿಯೂರು
ಸಾಮಾನ್ಯವಾಗಿ ಮನುಷ್ಯರು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ರೂಢಿ. ಆದರೆ ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿಯಲ್ಲಿ ಕೃಷ್ಣಮೂರ್ತಿ ಎನ್ನುವವರು ಕುರಿಯೊಂದಕ್ಕೆ ಈಗ್ಗೆ ನಾಲ್ಕು ವರ್ಷಗಳಿಂದಲೂ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.2021 ಮೇ 2 ರಂದು ಜನಿಸಿದ ಈ ಕುರಿಗೆ ಕರ್ಪಿ ಎಂದು ನಾಮಕರಣ ಮಾಡಲಾಗಿದ್ದು ಹುಟ್ಟುಹಬ್ಬದ ದಿನ ಕೃಷ್ಣಮೂರ್ತಿ ಅವರು ಕುರಿ ಕಾಲಿಗೆ ಬೆಳ್ಳಿ ಕಡಗ ತೊಡಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
ಈ ಹಿಂದೆ ಕೃಷ್ಣಮೂರ್ತಿ ಅವರು ಪ್ರೀತಿಯಿಂದ ಸಾಕಿದ್ದ ಕುರಿಯೊಂದು ದೊಡ್ಡದಾದ ಬಳಿಕ ಒಂದು ಹೆಣ್ಣು ಕುರಿ ಮರಿಗೆ ಜನ್ಮ ನೀಡಿ ಕಾರಣಾಂತರಗಳಿಂದ ತಾಯಿ ಕುರಿ ಸಾವನ್ನಪ್ಪಿತ್ತು. ತಬ್ಬಲಿಯಾಗಿದ್ದ ಕುರಿಮರಿ ದೊಡ್ಡದಾಗಿ ಬೆಳೆದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಐದು ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಅದೇ ರೀತಿ ಪ್ರತಿವರ್ಷವೂ ಅದರ ಹುಟ್ಟುಹಬ್ಬ ಆಚರಣೆ ಮುಂದುವರೆದಿದೆ.ಕುರಿ ಮಾಲೀಕ ಗ್ರಾಮದವರನ್ನು ಕುರಿ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದು, ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಬಗ್ಗೆ ಕುರಿ ಮಾಲೀಕ ಕೃಷ್ಣಮೂರ್ತಿ ಮಾತನಾಡಿ, ತಾಯಿಯನ್ನು ಕಳೆದುಕೊಂಡ ಮರಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಅದಕ್ಕೆ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ಗುಣಪಡಿಸಿಲಾಯಿತು. ನಂತರ ಕುರಿ ಮರಿ ನಮ್ಮೊಂದಿಗೆ ಬೆರೆಯಿತು. ಹಾಗಾಗಿ ಮನೆ ಮಂದಿಗೆ ತುಂಬಾ ಇಷ್ಟವಾಯಿತು. ಪ್ರತಿವರ್ಷ ಹುಟ್ಟುಹಬ್ಬ ಆಚರಿಸುತ್ತಿದ್ದು, ಈ ವರ್ಷ ಕುರಿಯ ಕಾಲಿಗೆ ಬೆಳ್ಳಿ ಕಡಗ ಮಾಡಿಸಿದ್ದೇನೆ. ಈ ಕುರಿಯನ್ನು ಯಾರಿಗೂ ಮಾರುವುದಿಲ್ಲ ಹಾಗೂ ಕೊಯ್ಯುವುದು ಇಲ್ಲ. ಮನೆಯ ಸದಸ್ಯನಾಗಿ ಇರುತ್ತದೆ. ಕುರಿಯ ಜೀವ ಇರುವವರೆಗೂ ನಾನು ಅದರ ಹುಟ್ಟು ಹಬ್ಬ ಆಚರಣೆ ಮಾಡುತ್ತೇನೆ ಎಂದರು.