- ರೌಡಿಶೀಟರ್ ಎಂದ ಸಿಎಂ, ಗೃಹ ಸಚಿವರ ಹೇಳಿಕೆಗೆ ಆಕ್ರೋಶ । ಸ್ಪೀಕರ್ ಖಾದರ್ ತನಿಖಾಧಿಕಾರಿಯೇ ಎಂದು ಕಿಡಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಂಗಳೂರಿನ ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಭೀಕರ ಹತ್ಯೆಯಲ್ಲಿ ಹಿಂದಿ ಮತಾಂಧ ಅಲ್ಪಸಂಖ್ಯಾತರು, ಜಿಹಾದಿಗಳ ಕೈವಾಡವಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಒಪ್ಪಿಸುವಂತೆ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆಗೆ ₹5 ಲಕ್ಷ ಸುಪಾರಿ ನೀಡಲಾಗಿದ್ದು, 8 ಜನ ಹಂತಕರನ್ನು ಬಂಧಿಸಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರರಂತಹವರು ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಅಂತಾ ಹೇಳಿ, ಹತ್ಯೆ ಪ್ರಕರಣವನ್ನೇ ಮುಚ್ಚಿ ಹಾಕಲು ಮುಂದಾಗಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಪೊಲೀಸ್ ಇಲಾಖೆಗೆ ಮುಕ್ತ ತನಿಖೆಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
ಪಾಕಿಸ್ತಾನ ಬೆಂಬಲಿಸುವ ಸಚಿವರು ಸುಹಾಸ್ ಶೆಟ್ಟಿಗೆ ರೌಡಿ ಶೀಟರ್ ಎನ್ನುತ್ತಾರೆ. ಗೃಹ ಸಚಿವ ಡಾ.ಪರಮೇಶ್ವರ, ಅಲ್ಲಿನ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಮೊನ್ನೆ ಮಂಗಳೂರಿಗೆ ಹೋಗಿ ಸಭೆ ಪೂರ್ವದಲ್ಲಿ ಅಲ್ಪಸಂಖ್ಯಾತ, ಜಿಹಾದಿ ಗೂಂಡಾಗಳ ಜೊತೆಗೆ ರಹಸ್ಯ ಸಭೆ ಮಾಡಿದ್ದು ಯಾಕೆ? ಮತೀಯ ಗೂಂಡಾಗಳ ಬ್ಲಾಕ್ ಮೇಲ್‌ಗೆ ಹೆದರಿದ ಸಚಿವರು ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ ಎಂದು ಹರಿಹಾಯ್ದರು.ಮಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾದ ಸುಹಾಸ್ ಶೆಟ್ಟಿ ಪ್ರಕರಣಕ್ಕೂ, ಫಾಝಿಲ್ ಕುಟುಂಬಕ್ಕೂ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿ, ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೀವೇನು ತನಿಖಾಧಿಕಾರಿಯೇ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ರಾವ್ ಜಾಧವ್, ಪಂಜು ಪೈಲ್ವಾನ್ ಇತರರು ಇದ್ದರು.- - -
(ಕೋಟ್)ಮಂಗಳೂರಿನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ ಭೇಟಿ ನೀಡಿ, ಮೃತನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಸುಹಾಸ್ ಶೆಟ್ಟಿ ಕುಟುಂಬದ ಕಣ್ಣೀರೊರೆಸಿ, ₹25 ಲಕ್ಷ ನಿಧಿ ನೀಡಿದ್ದಾರೆ. ಇಡೀ ಕುಟುಂಬ ಒತ್ತಡ, ನೋವಿನಿಂದಿದೆ. 2-3 ವರ್ಷದಿಂದ ಸುಹಾಸ್ ಶೆಟ್ಟಿ ಹತ್ಯೆಗೆ ಸಂಚು ನಡೆಸಿದ್ದರು. ಮಗನ ಅಗಲಿಕೆಯ ನೋವನ್ನು ತಂದೆ ತೋಡಿಕೊಂಡಿದ್ದಾರೆ. ₹25 ಲಕ್ಷ ಕೊಟ್ಟರೆ ಹೋದ ಜೀವ ಮರಳಿ ಬರೊಲ್ಲ. ನಮ್ಮ ಪಕ್ಷದ ನಾಯಕರು ತಮ್ಮ ಕರ್ತವ್ಯ ಮಾಡಿದ್ದಾರೆ.
- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ- - -
-4ಕೆಡಿವಿಜಿ1, 2, 3:ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.