ಕನ್ನಡಪ್ರಭ ವಾರ್ತೆ ಬೆಂಗಳೂರು
ಸಡಗರ, ಸಂಭ್ರಮದೊಂದಿಗೆ ಬಣ್ಣಗಳ ಹಬ್ಬ ಹೋಳಿ ಆಚರಿಸಲು ನಗರದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಉತ್ಸಾಹದಲ್ಲಿದ್ದಾರೆ.
ಮನೆಯಲ್ಲಿ ಕುಟುಂಬ ಸದಸ್ಯರು, ಸ್ನೇಹಿತರ ಗುಂಪುಗಳು, ನೆರೆ ಹೊರೆಯವರು, ಕಂಪನಿ, ಕೈಗಾರಿಕೆಗಳ ಉದ್ಯೋಗಿಗಳು ಸೇರಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಹೋಳಿ ಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ.
ಇನ್ನು ಐಷಾರಾಮಿ ಹೊಟೇಲ್‌ಗಳಲ್ಲಿ ಮತ್ತು ಅಪಾರ್ಟ್‌ಮೆಂಟ್ ಮತ್ತು ಕೆಲವು ಜನವಸತಿ ಪ್ರದೇಶಗಳಲ್ಲಿ ಹೋಳಿ ಹಬ್ಬ ಆಚರಣೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಗೀತ, ನೃತ್ಯದೊಂದಿಗೆ ಗುಂಪಾಗಿ ಹಬ್ಬ ಆಚರಣೆಗೆ ಬುಕ್ಕಿಂಗ್ ಆರಂಭವಾಗಿದೆ.
ನಗರದಲ್ಲಿ ಹೋಳಿಗೂ ತಟ್ಟಿದ ಬರ: ಈ ಬಾರಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ನೀರಿನ ಕೊರತೆ ಉಂಟಾಗಿರುವ ಕಾರಣ ಹಬ್ಬದ ಸಂಭ್ರಮಾಚರಣೆ ವೇಳೆ ನೀರನ್ನು ಅತ್ಯಂತ ಮಿತವಾಗಿ ಬಳಕೆ ಮಾಡಿ ಜವಾಬ್ದಾರಿ ಪ್ರದರ್ಶಿಸಬೇಕಿದೆ.
ಹೋಳಿ ವೇಳೆ ಬಣ್ಣದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡಲಾಗುತ್ತದೆ. ಬಣ್ಣ ಎರಚಲು ನೀರು ಬಳಕೆ ಮಾಡುವ ಜೊತೆಗೆ ಹಬ್ಬದ ಬಳಿಕ ಸ್ನಾನ ಮಾಡಲು ಕೂಡ ಹೆಚ್ಚು ನೀರು ಬೇಕಾಗುತ್ತದೆ. ಆದರೆ, ಬರ ಪರಿಸ್ಥಿತಿಯಲ್ಲಿ ನೀರನ್ನು ಪೋಲು ಮಾಡುವಂತಿಲ್ಲ.
ಹೀಗಾಗಿ, ಪರಿಸರ ಸ್ನೇಹಿಯಾದ ಬಣ್ಣಗಳನ್ನು ಬಳಕೆ ಮಾಡಬೇಕು. ನೀರಿನಿಂದ ಸುಲಭವಾಗಿ ತೊಳೆಯಲು ಸಾಧ್ಯವಾಗುವ ಬಣ್ಣಗಳನ್ನು ಬಳಕೆ ಮಾಡುವುದು ಉತ್ತಮ ಕ್ರಮವಾಗಿದೆ.
ಸುರಕ್ಷಿತ ಬಣ್ಣ ಬಳಸಿ: ಬಣ್ಣಗಳಲ್ಲಿ ಕೆಮಿಕಲ್ ಬಳಸುವ ಕಾರಣ ಚರ್ಮಕ್ಕೆ ಹಚ್ಚಿದಾಗ ತುರಿಕೆ, ಉರಿ ಸೇರಿದಂತೆ ಅನೇಕ ರೀತಿಯ ಚರ್ಮ ಸಮಸ್ಯೆಗಳು ಎದುರಾಗುತ್ತವೆ.
ಹೀಗಾಗಿ, ಚರ್ಮಕ್ಕೆ ಯಾವುದೇ ರೀತಿಯಿಂದ ಹಾನಿ ಮಾಡದ ಸುರಕ್ಷಿತ ಬಣ್ಣಗಳನ್ನು ಬಳಕೆ ಮಾಡಿ ಹೋಳಿ ಆಚರಣೆ ಮಾಡುವುದು ಸೂಕ್ತ.