ಕಬ್ಬು ಬೆಳೆಗಾರರು ದರ ನಿಗದಿಯಲ್ಲಿ ಸಾಕಷ್ಟು ಹೋರಾಟ ನಡೆಸಿ ನಿರ್ದಿಷ್ಟ ದರ ಪಡೆಯುವಲ್ಲಿ ಯಶಸ್ವಿಯಾದದ್ದೇನೋ ನಿಜ. ಉತ್ತಮ ಫಸಲು ಬಂದಿದೆ, ದರವೂ ನಿಗದಿಯಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಕಬ್ಬು ಬೆಳೆಗಾರರಿಗೆ ಅಸಲಿ ಸಂಕಟಗಳು ಈಗ ಎದುರಾಗಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಕಬ್ಬು ಬೆಳೆಗಾರರು ದರ ನಿಗದಿಯಲ್ಲಿ ಸಾಕಷ್ಟು ಹೋರಾಟ ನಡೆಸಿ ನಿರ್ದಿಷ್ಟ ದರ ಪಡೆಯುವಲ್ಲಿ ಯಶಸ್ವಿಯಾದದ್ದೇನೋ ನಿಜ. ಉತ್ತಮ ಫಸಲು ಬಂದಿದೆ, ದರವೂ ನಿಗದಿಯಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದ ಕಬ್ಬು ಬೆಳೆಗಾರರಿಗೆ ಅಸಲಿ ಸಂಕಟಗಳು ಈಗ ಎದುರಾಗಿದೆ. ಕಾರ್ಖಾನೆಗೆ ಕಬ್ಬು ಸಾಗಿಸುವಲ್ಲಿ ಎದುರಿಸುತ್ತಿರುವ ತಾಪತ್ರಯಗಯಗಳಿಂದ ಸಾಕಪ್ಪ ಕಬ್ಬಿನ ಸಹವಾಸ ಎಂದು ಗೋಳಾಡುವ ಪರಿಸ್ಥಿತಿ ಬಂದಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ಯಾಂಗ್‌ನವರಿಗೆ ಹೆಚ್ಚಿದ ಡಿಮ್ಯಾಂಡ್‌: ಈ ಬಾರಿ ಮಹಾರಾಷ್ಟ್ರದಿಂದ ಬರುವ ಕಬ್ಬು ಕಟಾವು ಗ್ಯಾಂಗ್‌ನವರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಹೀಗಾಗಿ ಗ್ಯಾಂಗ್‌ನವರಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗ್ಯಾಂಗ್‌ನವರು ರೈತರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಹೋರಾಟ ಮಾಡಿ ದರ ಪಡೆದ ಖುಷಿಯಲ್ಲಿದ್ದ ರೈತರಿಗೆ ಲಗಾನಿ ಹೆಸರಿನಲ್ಲಿ ಕಬ್ಬು ಕಟಾವು ಗ್ಯಾಂಗ್‌ನವರು ಸುಲಿಗೆಗೆ ಇಳಿದಿದ್ದಾರೆ. ಕೇಳಿದಷ್ಟು ಹಣ ಕೊಡದಿದ್ದರೆ ಕಬ್ಬು ಗದ್ದೆಯಿಂದ ಹೋಗುವುದೇ ಇಲ್ಲ. ಕೊನೆಗೆ ರೈತರು ಗದ್ದೆಯಲ್ಲೇ ಬೆಂಕಿ ಹಚ್ಚುವ ಪರಿಸ್ಥಿತಿ ಬರುತ್ತಿದೆ ಎಂದು ರೈತರು ದೂರಿದ್ದಾರೆ.

ಏನಿದು ಲಗಾನಿ?: ಕಬ್ಬು ಕಟಾವು ಗ್ಯಾಂಗ್‌ನವರು ಕಟಾವಿಗೆ ಬೆಳೆಗಾರರಿಂದ ಅನಧಿಕೃತವಾಗಿ ವಸೂಲಿ ಮಾಡುವ ಹಣಕ್ಕೆ ಲಗಾನಿ ಎಂದು ಕರೆಯಲಾಗುತ್ತದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡುವ ನುರಿತ ಗ್ಯಾಂಗ್‌ನವರಿಂದ ಇಂತಿಷ್ಟು ಹಣ ಭದ್ರತಾ ಠೇವಣಿ ಇಟ್ಟುಕೊಂಡು ತಮ್ಮ ವ್ಯಾಪ್ತಿಯ ರೈತರ ಕಬ್ಬು ಕಟಾವಿಗೆ ಈ ಗ್ಯಾಂಗ್‌ನವರನ್ನೇ ಬಳಸಿಕೊಳ್ಳುತ್ತಾರೆ. ಕಟಾವು, ಲೋಡ್‌ ಮಾಡುವುದು, ಸಾಗಣೆ ವೆಚ್ಚವನ್ನು ಕಾರ್ಖಾನೆಗಳು ರೈತರ ಬಿಲ್‌ನಲ್ಲಿ ಮುರಿದುಕೊಂಡು ಬಳಿಕ ರೈತರಿಂದ ವಸೂಲಿ ಮಾಡಿದ ಹಣವನ್ನು ಈ ಗ್ಯಾಂಗ್‌ನವರಿಗೆ ಪಾವತಿಸಲಾಗುತ್ತದೆ.

ಲಗಾನಿ ಹೆಸರಲ್ಲಿ ರೈತರ ಸುಲಿಗೆ:ಕಬ್ಬಿನ ಗ್ಯಾಂಗ್‌ನವರನ್ನು ಹಿಡಿದುಕೊಂಡು ಬರುವುದೇ ರೈತರಿಗೆ ಒಂದು ದೊಡ್ಡ ಸವಾಲಾಗಿದೆ. ಗ್ಯಾಂಗ್‌ ಲೀಡರ್ ಮನವೊಲಿಸಿ ಆತ ಹೇಳಿದಷ್ಟು ಹಣ ಕೊಡಲು ಒಪ್ಪಿದರೆ ಮಾತ್ರ ಮರುದಿನ ರೈತನ ಗದ್ದೆಗೆ ಗ್ಯಾಂಗ್‌ನವರು ಬರುತ್ತಾರೆ. ಹಣ ಕೊಡದ ರೈತರ ಕಬ್ಬು ಗದ್ದೆಯಲ್ಲೇ ಉಳಿಯುತ್ತದೆ. ಮುಂಚೆ ಒಂದು ಎಕರೆಗೆ ಗ್ಯಾಂಗ್‌ನವರು ₹3-4 ಸಾವಿರ, ಸಾಗಣೆಗೆ ಒಂದು ಟ್ರಿಪ್‌ಗೆ ₹500 ಕೊಡಲಾಗುತ್ತಿತ್ತು. ಆದರೆ ಈ ಬಾರಿ ದುಪ್ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಗ್ಯಾಂಗ್‌ನವರು ಒಂದು ಟ್ರಿಪ್‌ಗೆ ₹2500-3000 ಸಾವಿರ ಬೇಡಿಕೆ ಇಡುತ್ತಿದ್ದರೆ, ಕಬ್ಬು ಸಾಗಿಸಲು ಪ್ರತಿ ಟ್ರಿಪ್‌ಗೆ ₹2000-₹3000 ಬೇಡಿಕೆ ಇಡುತ್ತಿದ್ದಾರೆ. ಇದರ ಜತೆಗೆ ಊಟ, ವಸತಿ ವಾರಕ್ಕೊಮ್ಮೆ ಬಾಡೂಟ ಮಾಡಿಸಬೇಕಿದೆ.

ಕಾರ್ಖಾನೆ ಅಧಿಕಾರಿಗಳೂ ಭಾಗಿ: ಲಗಾನಿ ವ್ಯವಹಾರದಲ್ಲಿ ಗ್ಯಾಂಗ್‌ನವರಷ್ಟೇ ಫಲಾನುಭವಿಗಳಾಗಿಲ್ಲ. ಇವರ ಜೊತೆಗೆ ಕಾರ್ಖಾನೆ ಕೇನ್‌ ಅಧಿಕಾರಿಯಿಂದ ಹಿಡಿದು ಫೀಲ್ಡ್ ಸೂಪರ್‌ ವೈಸರ್‌ ವರೆಗಿನ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ. ಲಗಾನಿ ಹೆಸರಿನಲ್ಲಿ ರೈತರ ಶೋಷಣೆ ನಡೆಯುತ್ತಿರುವುದು ಕಾರ್ಖಾನೆ ಮಾಲೀಕರಿಗೂ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಸೇರಿಕೊಂಡು ರೈತರ ಶೋಷಣೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಸರ್ಕಾರದ ಆದೇಶ ಉಲ್ಲಂಘನೆ?: ಕಾರ್ಖಾನೆಗಳವರು ಗ್ಯಾಂಗ್‌ನವವರಿಂದ ಇಟ್ಟುಕೊಂಡ ಠೇವಣಿ ಹಣದಲ್ಲಿ ರೈತರಿಂದ ವಸೂಲಿ ಮಾಡುವ ಲಗಾನಿ ವೆಚ್ಚ ಮುರಿದುಕೊಂಡು ಗ್ಯಾಂಗ್‌ನವರಿಗೆ ಪಾವತಿಸಬೇಕು. ಕಟಾವು ಸಂದರ್ಭದಲ್ಲಿ ಕಾರ್ಖಾನೆ ಸಿಬ್ಬಂದಿ ಸ್ಥಳದಲ್ಲೇ ಇದ್ದು, ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದ ಆದೇಶವಿದೆ. ಸರ್ಕಾರದ ಈ ಆದೇಶದಕ್ಕೆ ಕವಡೆಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲ ಎಂಬುದು ರೈತ ಮುಖಂಡರ ಆರೋಪವಾಗಿದೆ.