ಹರಪನಹಳ್ಳಿ: ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಸೌಹಾರ್ದದಿಂದ ರಂಜಾನ್ ಹಬ್ಬ ಆಚರಿಸಬೇಕು ಎಂದು ಡಿವೈಎಸ್ಪಿ ಸಂತೋಷ ಚವ್ಹಾಣ್ ತಿಳಿಸಿದರು.ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲಾಖೆಯ ನಿಯಮಗಳನ್ನು ಎಲ್ಲರೂ ಪಾಲಿಸಬೇಕು, ಊರಿಗೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡಬಾರದು. ಹಬ್ಬವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಸಿಪಿಐ ಮಹಾಂತೇಶ ಜಿ. ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಂಜಾನ್ ಹಬ್ಬವನ್ನು ಎಲ್ಲರೂ ಶಾಂತ ರೀತಿಯಲ್ಲಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದರು.ನಗರಸಭೆ ಮಾಜಿ ಸದಸ್ಯ ಅಬ್ದುಲ್ ರೆಹಮಾನ್ ಮಾತನಾಡಿ, ನಮ್ಮ ಸಂತೋಷಕ್ಕಾಗಿ ಹಬ್ಬ ಹರಿದಿನಗಳನ್ನು ಆಚರಿಸಿತ್ತ ಬಂದಿದ್ದೇವೆ. ಅದೇ ರೀತಿ ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸೋಣ. ಶಾಂತಿ ಸಭೆಗೆ ಎಲ್ಲ ಸಮಾಜದ ಮುಖಂಡರನ್ನು ಕರೆದು ಮಾಡಿದರೆ ಸೂಕ್ತ ಎಂದು ಸಲಹೆ ನೀಡಿದರು.
ಹೂವಿನಹಡಗಲಿ ಸಿಪಿಐ ಮಲ್ಲು ಹೂಗಾರ, ಹರಪನಹಳ್ಳಿ, ಅರಸೀಕೆರೆ, ಹಲುವಾಗಲು, ಚಿಗಟೇರಿ ಹಡಗಲಿ, ಹಿರೇಹಡಗಲಿ, ಇಟಿಗಿ ಠಾಣೆಯ ಪಿಎಸ್‌ಐಗಳು ಮುಸ್ಲಿಂ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.