ಅನಾವಶ್ಯಕ ವಸ್ತುಗಳ ಖರೀದಿ ಬೇಡ: ಅಪರ ಜಿಲ್ಲಾಧಿಕಾರಿ

KannadaprabhaNewsNetwork |  
Published : Mar 18, 2026, 02:30 AM IST
ಉದ್ಘಾಟಿಸಿದರು | Kannada Prabha

ಸಾರಾಂಶ

ಇತರರಿಗೆ ಪ್ರದರ್ಶಿಸಲು ಅನಾವಶ್ಯಕವಾಗಿ ವಸ್ತು ಖರೀದಿಸದೆ, ಅಗತ್ಯ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ವಸ್ತು ಖರೀದಿಸಬೇಕು.

ಕನ್ನಡಪ್ರಭ ವಾರ್ತೆ ಕಾರವಾರ

ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರೇ ಆಗಿದ್ದಾರೆ. ಆಧುನಿಕ ಕಾಲದಲ್ಲಿ ವ್ಯವಹಾರ ಬಹಳ ವಿಸ್ತಾರಗೊಂಡಿದ್ದು, ಮನೆಯಲ್ಲೇ ಕುಳಿತುಕೊಂಡು ವಿಶ್ವ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಲಾಗುತ್ತಿದೆ. ಇತರರಿಗೆ ಪ್ರದರ್ಶಿಸಲು ಅನಾವಶ್ಯಕವಾಗಿ ವಸ್ತು ಖರೀದಿಸದೆ, ಅಗತ್ಯ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ವಸ್ತು ಖರೀದಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಸೋಮವಾರ ಕಾರವಾರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯುವಪೀಳಿಗೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಹೆಚ್ಚಾಗಿ ಮೋಸ ಮತ್ತು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ವಸ್ತುಗಳನ್ನು ಖರೀದಿಸುವ ಮೊದಲು ಅದರ ಮೌಲ್ಯ, ಗುಣಮಟ್ಟ, ಬೆಲೆ ಮತ್ತು ಸೇವೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿ. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಅನಾವಶ್ಯಕವಾಗಿ ರೀಲ್ಸ್ ವೀಕ್ಷಣೆ ಮಾಡುವುದನ್ನು ಕಡಿಮೆ ಮಾಡಿ ಜ್ಞಾನವರ್ಧಕ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಹಾಗೂ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರಿಂದ ಉತ್ತಮ ಗ್ರಾಹಕರಾಗಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಪ್ಪ ಗೌಳಿ, ಬ್ಯಾಂಕ್ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ, ಸರ್ಕಾರ ವಿವಿಧ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕ ತಮಗೆ ಒದಗಿಸಲಾಗುತ್ತಿದೆ. ಬ್ಯಾಂಕ್‌ನಿಂದ ಕರೆ ಮಾಡುತ್ತಿರುವುದು ಎಂದು ವಂಚಕರು ಹೇಳಿ, ಡಿಜಿಟಲ್ ಆರೆಸ್ಟ್, ಒಟಿಪಿ, ಕೆವೈಸಿ, ಯುಪಿಐ, ವಹಿವಾಟು ಸಂಬಂಧಿಸಿದ ಕರೆಗಳು ಬಂದಲ್ಲಿ ಕೂಡಲೇ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಪಿಕೆ ಲಿಂಕ್‌ಗಳ ತೆರೆಯಬಾರದು. ಪಬ್ಲಿಕ್ ವೈಪೈ, ಚಾರ್ಜರ್ ಬಳಸಬಾರದು. ಬ್ಯಾಂಕ್ ಖಾತೆ ಪ್ರತಿಯೊಬ್ಬರ ಭವಿಷ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹೇಮಲತಾ ಕೆ., ಈ ವರ್ಷ ಸುರಕ್ಷಿತ ಉತ್ಪನ್ನಗಳು–ಆತ್ಮವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯದೊಂದಿಗೆ ವಿಶ್ವ ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಗ್ರಾಹಕರ ಹಿತ ಕಾಯುವ ಉದ್ದೇಶದಿಂದಲೇ ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಾರುತಿ ವಡ್ಡರ ತಿಳಿಸಿದರು.

ಗ್ರಾಹಕರ ಸಹಾಯವಾಣಿ ಸಂಖ್ಯೆಗಳ ಫಲಕ ಅನಾವರಣಗೊಳಿಸಲಾಯಿತು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ನೈನಾ ಅಶೋಕ ಕಾಮಟೆ, ಕಾನೂನು ಮಾಪನ ಸಹಾಯಕ ನಿಯಂತ್ರಕ ದೇವರಾಜ ಇದ್ದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಜುನಾಥ್ ರೇವಣ್ಕಕರ್ ಸ್ವಾಗತಿಸಿದರು. ಹಾಲಪ್ಪ ಜೋಗಣ್ಣ ನಿರೂಪಿಸಿದರು. ವಿಜಯ ನಾಯಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಬಾರಿ 10-13ನೇ ಸ್ಥಾನದ ಮೇಲೆ ವಿಜಯನಗರ ಕಣ್ಣು
ಹುಡುಗಿಗಾಗಿ ತಮ್ಮನನ್ನೇ ಕೊಲೆ ಮಾಡಿದ ಅಣ್ಣ!