ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಹಬ್ಬ ಆಚರಿಸಿ

KannadaprabhaNewsNetwork |  
Published : Aug 27, 2025, 01:02 AM IST
ಫೋಟೋವಿವರ- (25ಎಂಎಂಎಚ್‌2) ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಸಂಜೆ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಸಾರ್ವಜನಿಕ ಶಾಂತಿಸಭೆಯಲ್ಲಿ ಕೂಡ್ಲಿಗಿ ಡಿ.ವೈ.ಎಸ್ಪಿ‌.ಮಲ್ಲೇಶ್ ದೊಡ್ಮನಿ ಮಾತನಾಡಿದರು | Kannada Prabha

ಸಾರಾಂಶ

ಯಾರ ಭಾವನೆಗಳಿಗೆ ಧಕ್ಕೆಯಾಗದಂತೆ ಶಾಂತಿ ಮತ್ತು ಸೌಹಾರ್ದದಿಂದ ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್‌ ಆಚರಿಸಬೇಕು.

  ಮರಿಯಮ್ಮನಹಳ್ಳಿ :  ಯಾರ ಭಾವನೆಗಳಿಗೆ ಧಕ್ಕೆಯಾಗದಂತೆ ಶಾಂತಿ ಮತ್ತು ಸೌಹಾರ್ದದಿಂದ ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್‌ ಆಚರಿಸಬೇಕು ಎಂದು ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಕೋರಿದ್ದಾರೆ.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಸಾರ್ವಜನಿಕ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಂಡಳಿಯವರು ಕಡ್ಡಾಯವಾಗಿ ಪೊಲೀಸ್‌ ಠಾಣೆ, ಜೆಸ್ಕಾನಿಂದ ಅನುಮತಿ ಪಡೆಯಬೇಕು. ಹಬ್ಬದಂದು ಮದ್ಯಪಾನ ಮಾಡಿ ವಿಚಿತ್ರ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಯಾರೂ ಸಾಮಾಜಿಕ ಶಾಂತಿ ಕದಡಬಾರದು. ಘರ್ಷಣೆ, ಗಲಭೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಮಾತನಾಡಿ, ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪಟಾಕಿ ಹಾಗೂ ಸ್ಫೋಟಕ ವಸ್ತುಗಳನ್ನು ಇರಿಸಬಾರದು. ಮೆರವಣಿಗೆಯಲ್ಲಿ ಡಿಜೆಗೆ ಅವಕಾಶವಿಲ್ಲ. ಧ್ವನಿವರ್ಧಕಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಹೇಳಿದರು.

ಭಾವನೆ ಕೆರಳಿಸುವಂತಹ, ಪ್ರಚೋದನಾಕಾರಿ ಬ್ಯಾನರ್‌ ಅಳವಡಿಸುವಂತಿಲ್ಲ. ಹಬ್ಬ ಮುಗಿಯುತ್ತಿದ್ದಂತೆ ಬ್ಯಾನ‌ರ್ ತೆರವುಗೊಳಿಸಬೇಕು. ಅನಧಿಕೃತವಾಗಿ ವಿದ್ಯುತ್ ಪಡೆದುಕೊಂಡು ಅವಘಡಗಳಾದಲ್ಲಿ ಆಯೋಜಕರೇ ನೇರ ಹೊಣೆಯಾಗಿರುತ್ತಾರೆ. ಮೆರವಣಿಗೆಯನ್ನು ನಿಯಮಾನುಸಾರ ನಿಗದಿತ ಸಮಯದೊಳಗೆ ಮುಗಿಸಬೇಕು ಎಂದು ಅವರು ಹೇಳಿದರು.

ಪಟ್ಟಣದ ಪಿಎಸ್‌ಐ ತಾರಾಬಾಯಿ ಮಾತನಾಡಿ, ಪಟ್ಟಣ ಸೇರಿ ಠಾಣಾ ವ್ಯಾಪ್ತಿಯಲ್ಲಿ 110ಕ್ಕೂ ಅಧಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕುರಿತು ಸಂಘಗಳು ನೋಂದಾಯಿಸಿಕೊಂಡಿದ್ದು, ಇನ್ನೂ ನೋಂದಾವಣೆ ಪ್ರಕ್ರಿಯೆ ನಡೆದಿದೆ. ಈದ್ ಮಿಲಾದ್ ಹಾಗೂ ಗಣೇಶ ಹಬ್ಬಗಳನ್ನು ಆಯಾ ಸಮುದಾಯದ ಮುಖಂಡರ ನೇತೃತ್ವದಲ್ಲಿ ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.

ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಗ್ರಾಪಂ ಸದಸ್ಯ ನಂದಿಬಂಡಿ ಸೋಮಪ್ಪ, ರೈತ ಸಂಘದ ಗೋಣಿ ಬಸಪ್ಪ, ಮುತ್ತಾವಲಿ ಎನ್‌.ಎಸ್‌. ಬುಡೇನ್ ಸಾಹೇಬ್, ಸ್ಥಳೀಯ ಮುಖಂಡರಾದ ಎಂ. ಬದ್ರಿನಾಥ ಶೆಟ್ಟಿ, ಡಿ. ರಾಘವೇಂದ್ರ ಶೆಟ್ಟಿ, ನಾಗಪ್ಪ ಲಡಕನಬಾವಿ ಮಾತನಾಡಿದರು.

ಉಪ ತಹಸೀಲ್ದಾರ್‌ ಶ್ರೀಧರ, ಜೆಸ್ಕಾಂನ ವೆಂಕಟೇಶ್, ಪಪಂ ಸದಸ್ಯರು, ಗ್ರಾಪಂ. ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು. ಆನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

PREV
Read more Articles on

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?