ಊರ ಹಬ್ಬದಂತೆ ಹಾಸನಾಂಬ ಜಾತ್ರೆ ಆಚರಿಸಿ

KannadaprabhaNewsNetwork | Published : Oct 20, 2024 1:54 AM

ಸಾರಾಂಶ

ಹಾಸನಾಂಬ ಮತ್ತು ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಬೇಕು. ಬರುವ ಭಕ್ತಾದಿಗಳಿಗೆ ಯಾವ ತೊಂದರೆ ಆಗದಂತೆ ಕೊಟ್ಟಿರುವ ಜವಾಬ್ದಾರಿಯನ್ನು ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ಕೊಟ್ಟರು. ಈ ಬಾರಿಯೂ ಕೂಡ ಮುಖ್ಯಮಂತ್ರಿಯನ್ನು ಆಹ್ವಾನ ಮಾಡಲಾಗಿದೆ. ಇದೇ ತಿಂಗಳ ೨೮ಕ್ಕೆ ಹಾಸನಾಕ್ಕೆ ಬರುವುದಾಗಿ ಹೇಳಿದ್ದು, ಇದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಇದೇ ತಿಂಗಳು ೨೪ರಿಂದ ಪ್ರಾರಂಭವಾಗಲಿರುವ ಹಾಸನಾಂಬ ಮತ್ತು ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಬೇಕು. ಬರುವ ಭಕ್ತಾದಿಗಳಿಗೆ ಯಾವ ತೊಂದರೆ ಆಗದಂತೆ ಕೊಟ್ಟಿರುವ ಜವಾಬ್ದಾರಿಯನ್ನು ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ಕೊಟ್ಟರು.

ನಗರದ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಹಾಸನಾಂಬ ಉತ್ಸವದ ವೆಬ್ಸೈಟ್‌ಗೆ ಚಾಲನೆ ಹಾಗೂ ಇಲಾಖೆಯ ವಿವಿಧ ಅಧಿಕಾರಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ನಡೆಯುವ ಅಧಿದೇವತೆ ಹಾಸನಾಂಬೆ ಮತ್ತು ಶ್ರಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಯಾವ ಗೊಂದಲವಾಗದಂತೆ ಸುಗಮ ದೇವಿ ದರ್ಶನಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳಿಗೆ ಆಯಾ ಜವಾಬ್ದಾರಿಗಳನ್ನು ವಹಿಸಲಾಗಿದೆ. ಹಿಂದಿನ ವರ್ಷದ ವಿಡಿಯೋ ತುಣುಕುಗಳನ್ನು ವೀಕ್ಷಣೆ ಮಾಡಿದ್ದು, ಈ ಬಾರಿಯೂ ಕೂಡ ಮುಖ್ಯಮಂತ್ರಿಯನ್ನು ಆಹ್ವಾನ ಮಾಡಲಾಗಿದೆ. ಇದೇ ತಿಂಗಳ ೨೮ಕ್ಕೆ ಹಾಸನಾಕ್ಕೆ ಬರುವುದಾಗಿ ಹೇಳಿದ್ದು, ಇದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಡಿಸಿಎಂಗೆ ಆಹ್ವಾನ: ಇನ್ನು ಉಪಮುಖ್ಯಮಂತ್ರಿಗಳ ನಿವಾಸಕ್ಕೆ ಹೋಗಿ ಆಹ್ವಾನಿಸಿದ್ದು, ಇದೇ ತಿಂಗಳು ೨೬ ರಿಂದ ೨೯ರ ಒಳಗೆ ಬರುವುದಾಗಿ ಹೇಳಿದ್ದಾರೆ ಎಂದರು. ಈ ವರ್ಷ ೯ ದಿವಸ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ೨೦ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬರುವ ನಿರೀಕ್ಷೆಯಿದೆ. ಹಿಂದಿನ ಬಾರಿ ಯಾವುದೇ ಸಣ್ಣಪುಟ್ಟ ಲೋಪದೋಷಗಳಾಗಿದೆ ಈ ಬಾರಿ ಆಗದಂತೆ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಚೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೇರಿದಂತೆ ಎಲ್ಲಾ ಇಲಾಖೆಗಳು ಮಾಡಬೇಕಾದ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ ಅದರಂತೆ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.

ರಸ್ತೆಗಳ ಡಾಂಬರೀಕರಣ: ಕೆಪಿಟಿಸಿಎಲ್, ಚೆಸ್ಕಾಂ ಸಿಬ್ಬಂದಿ ನಿಗಾವಹಿಸಿದ್ದು, ವಿದ್ಯುತ್‌ಗಳಿಂದ ಆಗುವ ಅನಾಹುತ ತಪ್ಪಿಸಲು ಎಲ್ಲಾ ಅಗತ್ಯ ತಯಾರು ಮೊದಲೇ ಮಾಡಿಕೊಳ್ಳಲಾಗಿದೆ ಎಂದು ಕಳೆದ ವರ್ಷ ವಿದ್ಯುತ್ ಅವಘಡವಾದ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ಮರುಕಳಿಸದಂತೆ ಎಚ್ಚರಿಕೆಯ ಮಾತನ್ನು ಜಿಲ್ಲಾಧಿಕಾರಿಗಳು ಹೇಳಿದರು. ರಸ್ತೆಗಳ ಡಾಂಬರೀಕರಣ ಮಾಡಲಾಗಿದೆ. ದೇವಸ್ಥಾನದ ಒಳ ಭಾಗದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳಿಗೆ ಯಾವ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಾಲಯ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಇದನು ವಿವಿಧ ಸಂಘ ಸಂಸ್ಥೆಗಳು ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು. ಸಿಸಿ ಕ್ಯಾಮರಾ: ಹಾಸನ ಉಪವಿಭಾಗಧಿಕಾರಿ ಮಾರುತಿ ಮಾತನಾಡಿ, ನಿಯೋಜನೆ ಮಾಡಿದ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲರನ್ನು ಒಟ್ಟುಗೂಡಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ಪ್ರತಿ ನೂರು ಮೀಟರ್‌ಗೆ ಪ್ರತಿ ಮ್ಯಾನೆಜ್ಮೆಂಟ್ ಕೌಂಟರ್‌ ಮಾಡಲಾಗಿದೆ. ಭಕ್ತಾದಿಗಳನ್ನು ಸರಿಯಾಗಿ ಕಳುಹಿಸುವುದು ಇವರ ಕೆಲಸ. ಪ್ರತಿ ಕೇಂದ್ರಕ್ಕೂ ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇದನ್ನು ವೀಕ್ಷಣೆ ಮಾಡಲು ಅಧಿಕಾರಿಗಳ ನೇಮಕ ಮಾಡಲಾಗಿದೆ. ಇಲ್ಲಿ ಏನೇ ತೊಂದರೆ ಆದರೂ ವಾಕಿ ಟಾಕಿ ಮತ್ತು ಸಿಸಿ ಕ್ಯಾಮರಾದಲ್ಲೂ ಮಾತನಾಡಬಹುದು ಎಂದರು. ಶ್ರಿ ಹಾಸನಾಂಬ ಮತ್ತು ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ವರ್ಷ ಸಂಪೂರ್ಣ ಯಶಸ್ವಿಗೊಳಿಸಲು ಇದೇ ವೇಳೆ ಮನವಿ ಮಾಡಿದರು. ತರಬೇತಿ ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ, ಜಿಲ್ಲಾ ಭೂ ದಾಖಲಾ ಅಧಿಕಾರಿ ಸಂಜಯ್ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರ್‌, ಉಪವಿಭಾಗಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article