ಪ್ರಜಾಪ್ರಭುತ್ವದ ಕಾರ್ಯಕ್ರಮವನ್ನು ಉತ್ತಮವಾಗಿ ಆಚರಿಸಿ

KannadaprabhaNewsNetwork | Published : Sep 14, 2024 1:58 AM

ಸಾರಾಂಶ

ಪ್ರಜಾಪ್ರಭುತ್ವದ ದಿನದ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಉದ್ದೇಶದಿಂದ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸಬೇಕು

ಕನ್ನಡಪ್ರಭ ವಾರ್ತೆ ಬೇಲೂರು

ಪ್ರಜಾಪ್ರಭುತ್ವದ ದಿನದ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಉದ್ದೇಶದಿಂದ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸೆ.೧೫ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಬೀದರ್‌ನಿಂದ ಚಾಮರಾಜನಗರವರೆಗೆ ಸುಮಾರು ೨೬೦೦ ಕಿ.ಮೀ ದೂರ ಒಟ್ಟು ೩೧ ಜಿಲ್ಲೆಯಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು. ಸಂವಿಧಾನ ಆಶೋತ್ತರ ಮತ್ತು ಪ್ರಜಾಫ್ರಬುತ್ವ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕಿದೆ ಎಂದರು.

ಎಲ್ಲಾ ಸರ್ಕಾರಿ, ಖಾಸಗಿ ಶಾಲಾ-ಕಾಲೇಜು ನೌಕರರು, ಆಶಾ ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯರು ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು. ಪ್ರಜಾಪ್ರಭತ್ವದ ದಿನಕ್ಕಾಗಿ ವಿಶೇಷವಾದ ವೆಬ್ ಸೆಟ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಮೊಬೈಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಹಾಗೇಯೆ ಮಾನವ ಸರಪಳಿ ದಿನ ತಾವು ಭಾಗವಹಿಸಿ ಪೋಟೋ ಅಪ್‌ಲೋಡ್ ಮಾಡಿದರೆ ಪ್ರಮಾಣ ಪತ್ರವನ್ನು ಪಡೆಯುವ ಅವಕಾಶ ಕಲ್ಪಿಸಿದೆ ಎಂದರು. ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಸರ್ಕಾರ ಕಳೆದ ವರ್ಷ ಸಂವಿಧಾನ ಓದು ಎಂಬ ಅಭಿಯಾನ ಅರ್ಥಪೂರ್ಣವಾಗಿ ನಡೆಸಿತ್ತು. ಮಾನವ ಸರಪಳಿಗೆ ಮುಂದಾಗಿರುವುದು ಸ್ವಾಗತಾರ್ಹ. ಸೆ.15ರಂದು ಬೆಳಿಗ್ಗೆ ೮-೩೦ ರಿಂದ ೯-೩೦ ತನಕ ನಡೆಯುವ ಮಾನವ ಸರಪಳಿಗೆ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಜರಿರಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಬೇಕಿದೆ. ಅಲ್ಲದೆ ಬೇಲೂರು ತಾಲೂಕಿನ ಅಂಗಡಿಹಳ್ಳಿಯಿಂದ ಮಾಗಡಿ ಕೈಮರ ತನಕ ಒಟ್ಟು ೩೦ ಕಿ.ಮೀ ದೂರ ಮಾನವ ಸರಪಳಿಗೆ ಈಗಾಗಲೇ ತಾಲೂಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆ ಸಜ್ಜಾಗಿದೆ. ಎಲ್ಲಾ ಸಂಘ-ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಕನ್ನಡ ಪರ ಸಂಘಟನೆಗಳು ವಿಶೇಷವಾಗಿ ಭಾಗವಹಿಸುವಂತೆ ಮನವಿ ಮಾಡಿದರು.. ಸಕಲೇಶಪುರ ಉಪವಿಭಾಗಧಿಕಾರಿ ಶೃತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್, ಬಿಇಒ ರಾಜೇಗೌಡ, ಪ್ರಾಂಶುಪಾಲ ಡಾ.ಮಹೇಶ್, ಹರೀಶ್, ಕರವೇ ಅಧ್ಯಕ್ಷ ಚಂದ್ರಶೇಖರ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಮುಖ್ಯಾಧಿಕಾರಿ ಸುಜಯ್, ತಾಪಂ ಮಾಜಿ ಅಧ್ಯಕ್ಷ ಪವರ್ತಯ್ಯ ಇದ್ದರು.

Share this article