ಗದಗ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ನಿಗದಿ ಮಾಡಿದ ದಿನದಂದು ಜಿಲ್ಲಾಡಳಿತ ಭವನದಲ್ಲಿ ಸಾಂಕೇತಿಕವಾಗಿ ಜಯಂತಿ ಜರುಗುವುದು, ಮುಂದೆ ಸಮುದಾಯದವರು ತೀರ್ಮಾನಿಸಿದಂತೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಶ್ರೀಮಹರ್ಷಿ ವಾಲ್ಮೀಕಿ ಕುರಿತು ಅವರ ಸಾಧನೆ ಕುರಿತು ಮುಂದಿನ ಪೀಳಿಗೆಗೆ ತಿಳಿಸಿ ಕೊಡುವಂತೆ ಆಗಬೇಕು, ಹಾಗಾಗಿ ಸಮಾಜ ಇಲಾಖೆ ಸಹಯೋಗದೊಂದಿಗೆ ಶ್ರೀಮಹರ್ಷಿ ವಾಲ್ಮೀಕಿ ಅವರ ಕುರಿತು ಸಣ್ಣ ಕಥೆಗಳ ಬರವಣಿಗೆಯ ಸ್ಪರ್ಧೆ ಏರ್ಪಡಿಸಿ ಆಯ್ದ ಕಥೆಗಳನ್ನು ಸಂಕಲನದಲ್ಲಿ ಪ್ರಕಟಿಸುವಂತೆ ತಿಳಿಸಿದರು.ಸಮುದಾಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಹಿತಿ, ಪಿಎಚ್ಡಿ ಮಾಡಿದಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು, ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ವಾಲ್ಮೀಕಿ ಅವರ ಕುರಿತು ಸುದೀರ್ಘವಾಗಿ ಅಧ್ಯಯನ ಮಾಡಿದ ಇಬ್ಬರು ಸಂಪನ್ಮೂಲ ವ್ಯಕ್ತಿಗಳ ಹೆಸರು ತಿಳಿಸಲು ಸಮುದಾಯದ ಮುಖಂಡರಿಗೆ ತಿಳಿಸಿದರು.
ಸಮುದಾಯದ ಮುಖಂಡರು ಮಾತನಾಡಿ, ಭೀಷ್ಮಕೆರೆಯ ಹತ್ತಿರುವಿರುವ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲು ತೀರ್ಮಾನಿಸಲಾಗಿದೆ. ಅದನ್ನು ಅಭಿವೃದ್ಧಿ ಪಡಿಸಬೇಕು. ಜಯಂತಿ ದಿನದಂದು ಮೆರವಣಿಗೆಗೆ ಕಲಾವಿದರ ತಂಡ ಒದಗಿಸಿಕೊಡಬೇಕು, ಜಿಲ್ಲೆಯಲ್ಲಿ ಶ್ರೀವಾಲ್ಮೀಕಿ ಭವನಗಳ ಕಾಮಗಾರಿಗಳು ಚುರುಕುಗೊಳಬೇಕು ಎಂದು ತಿಳಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ.ಕೆ.ಆರ್., ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎ.ಸಿ. ಗಂಗಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಇತರರು ಇದ್ದರು.