ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರೇಮಿಗಳ ದಿನವನ್ನು ‘ಪುಸ್ತಕ ಪ್ರೇಮಿಗಳ ದಿನ’ವಾಗಿಯೂ ಆಚರಿಸುವ ನಿಟ್ಟಿನಲ್ಲಿ ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಲೇಖಕ ಶಶಿರಾಜ್ ರಾವ್ ಕಾವೂರು ಬರೆದ ಪರಶುರಾಮ ಮತ್ತು ಛತ್ರಪತಿ ಶಿವಾಜಿ- ಎರಡು ಕನ್ನಡ ನಾಟಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ.ಫೆ.14ರಂದು ಸಂಜೆ 5 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಾವಿದ, ನಟ ಮೈಮ್ ರಾಮ್‌ದಾಸ್, ಸಭಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ದುರದುಂಡೇಶ್ವರ ಮಠ ನಿಡಸೋಸಿಯ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್, ನಟ ಡಾ. ದೇವದಾಸ್ ಕಾಪಿಕಾಡ್, ಯಕ್ಷರಂಗಾಯಣದ ನಿಕಟಪೂರ್ವ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ, ಡಾ.ನಾ. ದಾಮೋದರ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದಿರೆ ಅಭಿನಯದ ಏಕಾದಶಾನನ ನಾಟಕ ಹಾಗೂ ಕುದ್ರೋಳಿ ಗಣೇಶ್ ಅವರಿಂದ ಮೈಂಡ್ ಮ್ಯಾಜಿಕ್ ನಡೆಯಲಿದೆ. ಸಮಾರಂಭದಲ್ಲಿ ಪುಸ್ತಕ ಪ್ರದರ್ಶನ, ವಾಚನ ಇನ್ನಿತರ ಕಾರ್ಯಕ್ರಮ ನಡೆಯಲಿದೆ ಎಂದರು.ಕೃತಿಕಾರ ಶಶಿರಾಜ್ ಕಾವೂರು, ಕುದ್ರೋಳಿ ಗಣೇಶ್, ಕರುಣಾಕರ ಶೆಟ್ಟಿ, ಸುರೇಶ್ ಬೆಳ್ಚಡ, ಚಂದ್ರಶೇಖರ್ ಮತ್ತಿತರರು ಇದ್ದರು.
ಡಾ.ಕೆ.ಜಿ.ವಸಂತ ಮಾಧವ ಕೃತಿಗಳ ಬಿಡುಗಡೆ: ಇತಿಹಾಸ ಸಂಶೋಧಕ , ಉಪನ್ಯಾಸಕ ಡಾ. ವಸಂತ ಮಾಧವರು 87ರ ಇಳಿ ಹರೆಯದಲ್ಲೂ ಅಧ್ಯಯನ ಮಾಡುತ್ತಿದ್ದು ಕ್ರಿಯಾಶೀಲರಾಗಿ ಬರೆಯುತ್ತಿರುವ ನಾಡಿನ ಪ್ರಮುಖ ಇತಿಹಾಸ ಬರಹಗಾರರಾಗಿದ್ದು ಅವರ ಬರಹಗಳು ಅಮೂಲ್ಯವಾಗಿವೆ ಎಂದು ಜನಪದ ವಿದ್ವಾಂಸ ಡಾ. ಗಣೇಶ್ ಸಂಕಮಾರ್ ಹೇಳಿದರು.ಮೂಲ್ಕಿ ತಾಲೂಕು ಕಸಾಪ ಘಟಕ ನೇತ್ರತ್ವದಲ್ಲಿ ಪಾವಂಜೆಯ ಡಾ. ಕೆ.ಜಿ. ವಸಂತ ಮಾಧವರ ಮನೆಯ ಅಂಗಳದಲ್ಲಿ ಜರಗಿದ ಡಾ. ಕೆ.ಜಿ. ವಸಂತ ಮಾಧವರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಾವಂಜೆಯ ಡಾ. ವಸಂತಮಾಧವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸಂತ ಮಾಧವರ ಇತಿಹಾಸ ಯಾನ ಸಾಂಸ್ಜೃತಿಕ ನೋಟಗಳು ಕೃತಿ ಹಾಗೂ ಡಾ. ಪದ್ಮನಾಭ ಭಟ್ ಬರೆದ ಡಾ. ಕೆ. ಜಿ. ವಸಂತಮಾಧವರ ಪರಿಚಯ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಕೃತಿಗಳನ್ನು ದುಡ್ಡು ಕೊಟ್ಟು ಕೊಂಡು ಓದಿ. ಇತರರಿಗೂ ಓದಲು ಪ್ರೇರೇಪಿಸಿ, ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದರು.ವಿದ್ವಾಂಸ ಕೆ.ಎಲ್. ಕುಂಡಂತಾಯ, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಹೆರಿಕ್ ಪಾಯಸ್, ಮೋಹನ್ ರಾವ್ ಕಿಲ್ಪಾಡಿ, ಉದಯಕುಮಾರ ಹಬ್ಬು, ವಸಂತ ಮಾಧವರ ಪತ್ನಿ ವಿನೋದಾ, ಮಗಳು ನಮಿತಾ ಇದ್ದರು.