ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಹಿಂದೂಗಳು ಬದುಕುವುದೇ ದುಸ್ತರವಾಗಿದೆ. ಮುಸ್ಲಿಂ ಓಲೈಕೆ ಮತ್ತು ತುಷ್ಠೀಕರಣದಿಂದಾಗಿ ಹಿಂದೂಗಳು ತಮ್ಮ ಹಬ್ಬಗಳ ಆಚರಣೆಗಳನ್ನು ಮಾಡುವುದೇ ಕಷ್ಟವಾಗಿದ್ದು, ಅದಕ್ಕೆ ಮದ್ದೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದು ಜಿಪಂ ಮಾಜಿ ಸದಸ್ಯ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂಗಳು ಗಣೇಶ ಉತ್ಸವ, ಹನುಮ ಜಯಂತಿ ಹಾಗೂ ಇತರ ಧಾರ್ಮಿಕ ಆಚರಣೆಗಳು ಹಾಗೂ ಉತ್ಸವಗಳನ್ನು ನಡೆಸುವುದು ನಿಮ್ಮ ಆಡಳಿತದಲ್ಲಿ ಅಪರಾಧವೇ ? ಹಿಂದೂಗಳ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದೆಂದಾದರೆ, ಮಸೀದಿಗಳು ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿದೆಯೇ ? ಮಸೀದಿಯ ಒಳಗಡೆ ಕಲ್ಲುಗಳನ್ನು ಶೇಖರಿಸಿಟ್ಟಿರುವಂತೆ ಇನ್ನೂ ಯಾವ ಯಾವ ಮಾರಕಾಸ್ತ್ರಗಳನ್ನು, ಬಾಂಬ್‌ಗಳನ್ನು ಇಟ್ಟಿರಬಹುದೆಂದು ತಪಾಸಣೆ ಮಾಡುವಿರಾ ? ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ಮೆರವಣಿಗೆಯ ಮೇಲೆ ಕಲ್ಲು ಎಸೆದು, ಗಲಭೆ ಸೃಷ್ಠಿಸಿ, ವಿದ್ಯುತ್ ಕಡಿತಗೊಳಿಸಲು ಕುಮ್ಮಕ್ಕು ನೀಡಿದವರು ಯಾರು ? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ನ್ಯಾಯ ಕೇಳಿ, ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ಪೊಲೀಸರು ಮನಸೋ ಇಚ್ಛೆ ಮಹಿಳೆಯರನ್ನೂ ಬಿಡದೆ ಲಾಠಿಪ್ರಹಾರ ಮಾಡಲು ನಿರ್ದೇಶನ ನೀಡಿದವರು ಯಾರು ? ಪದೇ ಪದೇ ರಾಜ್ಯದಲ್ಲಿ ಈ ರೀತಿ ಗಲಭೆ-ದೊಂಬಿ ಸೃಷ್ಟಿಸುತ್ತಿರುವ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಹುಸಂಖ್ಯಾತ ಹಿಂದೂಗಳ ಆಚರಣೆಗಳಿಗೆ ಮುಂದಿನ ದಿನಗಳಲ್ಲಿ ಮುಸ್ಲಿಂ ಮತಾಂದರಿಂದ ಯಾವುದೇ ತೊಂದರೆಗಳು ಆಗದಂತೆ ಕಠಿಣಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ಮೇಲಿನ ಮುಸ್ಲಿಮರ ದಾಳಿಯನ್ನು ಖಂಡಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸೆ.10ರಂದು ಬೆಳಗ್ಗೆ10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್‌ರಾವ್ ಜಾದವ್, ವೆಂಕಟೇಶ್, ಮುರುಗೇಶ್, ಚಿದಾನಂದ, ಕುಬೇರಪ್ಪ, ರುದ್ರೇಶ್, ಶಿವಾಜಿ, ಅ.ಮ. ಪ್ರಕಾಶ್, ರಾಜು, ರುದ್ರಯ್ಯ, ನಾಗರಾಜ್, ಸಾಕ್ರಾನಾಯ್ಕ ಮತ್ತಿತರರಿದ್ದರು.ಶಾಸಕ ಬಿ.ಕೆ. ಸಂಗಮೇಶ್ವರ್ ಮುಂಜಿ ಮಾಡಿಸಿಕೊಳ್ಳಲಿ
ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಕೆ.ಇ.ಕಾಂತೇಶ್ ಹೇಳಿದರು.ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ ಮುಂದಿನ ಜನ್ಮ ಬೇಡ, ಈಗಲೇ ಮುಸ್ಲಿಂ ಧರ್ಮಕ್ಕೆ ಸೇರಿ, ಮುಂಜಿ ಮಾಡಿಸಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.