ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಾಳಿದಾಸ ರಸ್ತೆಯಲ್ಲಿರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ಸಹಯೋಗದೊಂದಿಗೆ ಸೋಮವಾರ ಪೌರಕಾರ್ಮಿಕರಿಗೆ ಸೀರೆ, ಬಳೆ, ಎಳ್ಳು, ಬೆಲ್ಲದೊಂದಿಗೆ ಬಾಗಿನ ನೀಡುವ ಮೂಲಕ ಸಂಕ್ರಾಂತಿಯ ಶುಭಾಶಯ ಕೋರಲಾಯಿತು.ಇದೇ ವೇಳೆ ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾ ನಂದೀಶ್ ಮಾತನಾಡಿ, ಪೌರಕಾರ್ಮಿಕ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯ ಜವಾಬ್ದಾರಿಯೊಂದಿಗೆ ಪಟ್ಟಣ ಜನರ ಆರೋಗ್ಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಹೋದರಿಯರಿಗೆ ಬಾಗಿನ ನೀಡಿದ್ದು, ಇದನ್ನು ಪ್ರತಿವರ್ಷ ಮುಂದುವರಿಸಲಿ. ಇಂತಹ ಮೌಲ್ಯಯುತ ಸೇವೆ ತಮ್ಮಲ್ಲಿ ಖುಷಿ ನೀಡಿದ್ದು, ನಮಗಾಗಿ ದುಡಿಯುವ ಪೌರಕಾರ್ಮಿಕ ಮಹಿಳೆಯರ ಮನದಲ್ಲಿ ಸಂತಸ ಮೂಡಿರುವುದು ಸಾರ್ಥಕ ತರಿಸಿದೆ ಎಂದರು.
ಆಸ್ಪತ್ರೆಯ ವೈದ್ಯ ಡಾ. ಮಂಜುನಾಥ್ ಮಾತನಾಡಿ, ಹಬ್ಬಗಳು ಸಂಸ್ಕಾರ ಬಿಂಬಿಸುವ ಪ್ರತೀಕವಾಗಿವೆ. ಭಾರತೀಯ ಸಂಪ್ರದಾಯದಲ್ಲಿ ಸಂಕ್ರಾಂತಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ರೈತರು ಹೊಸ ವರ್ಷದಂತೆ ಆಚರಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಗುತ್ತಿದೆ. ಇನ್ನು ಜಾನುವಾರುಗಳಿಗೆ ಸಿಂಗಾರಗೊಳಿಸಿ, ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ ಎಂದರು.ಕಾಂಗರೂ ಕೇರ್ ಸಿಇಒ ಮತ್ತು ಸಂಸ್ಥಾಪಕ ಡಾ. ಶೇಖರ್ ಸುಬ್ಬಯ್ಯ, ವೈದ್ಯರಾದ ಡಾ. ವೀಣಾ, ಡಾ. ಶ್ರುತಿ, ಡಾ. ಶುಭಾ, ಡಾ. ಸ್ವಾತಿ, ಡಾ. ರಶ್ಮಿ ಕಿಶೋರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಅಕ್ಷತಾ, ನಿವೇದಿತಾ, ಗಣೇಶ್, ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಘಾಟ್ಕೆ, ಮಾಳಿನಿ ಪಾಲಾಕ್ಷ, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್,
ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ಜಿಲ್ಲಾ ಒಕ್ಕಲಿಗರ ಸಂಘ ನಿರ್ದೇಶಕರು ಎ. ರವಿ, ಸಂಧ್ಯಾರಾಣಿ, ಐಶ್ವರ್ಯ, ಮಹಾನ್ ಶ್ರೇಯಸ್, ರಾಮಪ್ಪ ಮೊದಲಾದವರು ಇದ್ದರು.ಮಕರ ಸಂಕ್ರಾಂತಿ ಸಂಭ್ರಮ: ಜನಪದ ಹಾಡುಗಳು, ಸಂಸ್ಕೃತಿಯ ಅರಿವು
ಮೈಸೂರು: ನಗರದ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಉತ್ಸಾಹಪೂರ್ಣವಾಗಿ ಮತ್ತು ಸಂಸ್ಕೃತಿಯ ಭಾವನಾತ್ಮಕತೆಯಿಂದ ಆಚರಿಸಿದರು.ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮವು ಸಂಕ್ರಾಂತಿ ಹಬ್ಬದ ಮಹತ್ವವನ್ನು ಪರಿಚಯಿಸುವುದರೊಂದಿಗೆ ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಹಿರಿಮೆಯಿಂದ ಪ್ರದರ್ಶಿಸಿತು.
ಜನಪದ ಹಾಡುಗಳ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯನ್ನು ಎತ್ತಿ ತೋರಿಸುವುದರೊಂದಿಗೆ, ಹಬ್ಬದ ಒಗ್ಗಟ್ಟಿನ ಮತ್ತು ಕೃತಜ್ಞತೆಯ ಆಧ್ಯಾತ್ಮವನ್ನು ಪ್ರತಿಬಿಂಬಿಸಿತು. ಮಕರ ಸಂಕ್ರಾಂತಿಯ ಮಹತ್ವವನ್ನು ವಿವರಿಸುವ ಆಲೋಚನಾತ್ಮಕ ಭಾಷಣವೊಂದನ್ನು ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ನೀಡಿದರು.