ಕೊಡಗಲ್ಲಿ ದೀಪಾ ಬಸ್ತಿ ಕುಟುಂಬಸ್ಥರಲ್ಲಿ ಸಂಭ್ರಮ

KannadaprabhaNewsNetwork |  
Published : May 22, 2025, 12:50 AM IST
ಚಿತ್ರ : 26ಎಂಡಿಕೆ6 : ಸಿಹಿ ಹಂಚಿಕೊಂಡ ದೀಪಾ ಬಸ್ತಿ ತಾಯಿ ಸುಧಾ ಮತ್ತು ತಂದೆ ಪ್ರಕಾಶ್. | Kannada Prabha

ಸಾರಾಂಶ

ದೀಪಾ ಬಸ್ತಿ ಅವರಿಗೆ ಬೂಕರ್‌ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕೊಡಗಿನಲ್ಲಿರುವ ತಂದೆ- ತಾಯಿ ಹಾಗೂ ದೀಪಾ ಬಸ್ತಿ ಅವರ ಪತಿ ನಾಣಯ್ಯ ಹಾಗೂ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಬರಹಗಾರ್ತಿ ಮತ್ತು ವಕೀಲೆ ಬಾನು ಮುಷ್ತಾಕ್ ಅವರ 12 ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ನ್ನು ಕೊಡಗು ಮೂಲದ ದೀಪಾ ಬಸ್ತಿ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದು, ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ 2025 ದೊರಕಿದೆ.

ದೀಪಾ ಬಸ್ತಿ ಅವರಿಗೆ ಬೂಕರ್ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕೊಡಗಿನಲ್ಲಿರುವ ತಂದೆ-ತಾಯಿ ಹಾಗೂ ದೀಪಾ ಬಸ್ತಿ ಅವರ ಪತಿ ನಾಣಯ್ಯ ಹಾಗೂ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ದೀಪಾ ಬಸ್ತಿ ಹಾಗೂ ಅವರ ಪತಿ ನಾಣಯ್ಯ ಅವರು ಮಡಿಕೇರಿಯ ಡೇರಿ ಫಾರ್ಮ್ ನಲ್ಲಿ ಕಳೆದ ನಾಲ್ಕು ವರ್ಷದಿಂದ ವಾಸವಿದ್ದಾರೆ. ದೀಪಾ ಅವರು ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಕೊಡಗು ವಿದ್ಯಾಲಯ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ. ಮಂಗಳೂರು ವಿವಿಯ ಕೊಣಜೆಯಲ್ಲಿ ಮಾಸ್ ಕಮ್ಯೂನಿಕೇಷನ್ ಇನ್ ಜರ್ನಲಿಸಂ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

ಈ ಹಿಂದೆ ಇಂಡಿಯನ್ ಎಕ್ಸ್ ಪ್ರೆಸ್, ದಿ ಹಿಂದೂ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ ಹವ್ಯಾಸಿ ಬರಹಗಾರರಾಗಿದ್ದಾರೆ.

ದೀಪಾ ಅವರ ತಂದೆ ಪ್ರಕಾಶ್ -ತಾಯಿ ಸುಧಾ ಅವರು ಮಡಿಕೇರಿ ತಾಲೂಕಿನ ಮದೆನಾಡಿನಲ್ಲಿ ನೆಲೆಸಿದ್ದಾರೆ.

ದೀಪಾ ಅವರು ಕೊಡಗಿನ ಗೌರಮ್ಮ ಅವರ ಕತೆಗಳನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದಾರೆ. ಅಲ್ಲದೆ ಶಿವರಾಮ್ ಕಾರಂತರ ಅದೇ ಊರು, ಅದೇ ಮರ ಭಾಷಾಂತರ ಮಾಡಿದ್ದಾರೆ. ಇದೀಗ ಬಾನು ಮುಷ್ತಾಕ್ ಅವರ 12 ಸಣ್ಣ ಕಥಾ ಸಂಕಲನ ''''''''''''''''ಹಾರ್ಟ್ ಲ್ಯಾಂಪ್ ಅನ್ನು ಭಾಷಾಂತರ ಮಾಡಿದ್ದು, ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರಕಿದೆ.

ಮಗಳು ದೀಪಾ ಮಾಡಿರುವ ಸಾಧನೆಯ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ಗೊತ್ತಾಗುತ್ತಿಲ್ಲ. ಮಗಳ ಬಗ್ಗೆ ಹೆಮ್ಮೆಯಾಗುತ್ತಿದೆ. ಮನೆಯಲ್ಲಿ ಸಿಹಿ ಹಂಚಿ ನಾವು ಸಂಭ್ರಮಿಸಿದ್ದೇವೆ. ಹಾರ್ಟ್ ಲ್ಯಾಂಪ್ ಬೂಕರ್ ಶಾರ್ಟ್ ಲಿಸ್ಟ್ ಗೆ ಬಂದಾಗಲೇ ಹೆಮ್ಮೆಯಾಗಿತ್ತು. ಇದೀಗ ಬೂಕರ್ ಪ್ರಶಸ್ತಿಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಇದು ಭಾರತಕ್ಕೆ ಹೆಮ್ಮೆ, ಕೊಡಗಿನ ಕುವರಿಯ ಸಾಧನೆಗೆ ಎಲ್ಲರೂ ಸಂಭ್ರಮಿಸಿದ್ದೇವೆ ಎಂದು ತಾಯಿ ಸುಧಾ ಕನ್ನಡಪ್ರಭದೊಂದಿಗೆ ಸಂತಸ ಹಂಚಿಕೊಂಡರು.

ಮಗಳು ಈಗಾಗಲೇ ಲಂಡನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು, ನಮಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾಳೆ.

ಮೊದಲು ಮಗಳು ಅಷ್ಟಾಗಿ ಬರೆಯುತ್ತಿರಲಿಲ್ಲ. ಕೊಡಗು ವಿದ್ಯಾಲಯದಲ್ಲಿ ದಿಕ್ಸೂಚಿಗೆ ಬರೆಯುತ್ತಿದ್ದಳು, ಆಕಾಶವಾಣಿಯಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಾಳೆ. ಇತ್ತೀಚೆಗೆ ಅನುವಾದ ಆರಂಭಿಸಿದ್ದಳು. ಅವಳ ಶ್ರಮಕ್ಕೆ ಉತ್ತಮ ಪ್ರತಿಫಲ ದೊರಕಿದೆ ಎಂದು ತಾಯಿ ಸುಧಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಗಳು ಇದೀಗ ಅನುವಾದ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಂಗ್ಲಿಷ್ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಅವರ ಪ್ರೇರಣೆಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ದೀಪಾಗೆ ಹೆಚ್ಚು ಆಸಕ್ತಿ ಬಂದಿದೆ ಎಂದು ತಂದೆ ಬಿ.ಎನ್. ಪ್ರಕಾಶ್ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!