ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಿ, ಶ್ರೀ ದುಗಲಮ್ಮ ದೇವಿ, ಶ್ರೀ ಕೆಂಚಮ್ಮ ದೇವಿ, ಸುಂಕ್ಲಮ್ಮ ದೇವಿ, ಶ್ರೀ ಕುಂಬಾರ ದ್ಯಾವಮ್ಮ ದೇವಿ, ಶ್ರೀ ಕುರುಬರ ದ್ಯಾವಮ್ಮ ದೇವಿ, ಶ್ರೀ ಗರ್ಜಿನ ಗಡ್ಡೆ ತಾಯಮ್ಮ ದೇವಿ, ಶ್ರೀ ಸಿರಿಗೇರಮ್ಮ ದೇವಿ, ಶ್ರೀ ಕಾಳಿಕಾದೇವಿ ದೇವತೆಗಳಿಗೆ ಮಹಾ ಪ್ರಸಾದ ಸಮರ್ಪಿಸಿ, ಡೊಳ್ಳು, ಕಳಸ ಮೇಳದೊಂದಿಗೆ ಬುಧವಾರ ಬೆಳಗಿನ ಜಾವ ಕುಂಭೋತ್ಸವ ಆಚರಣೆ ಮಾಡಲಾಯಿತು.
ಸಿರಿಗೇರಿ ಗ್ರಾಮದಲ್ಲಿ 9 ವರ್ಷಕ್ಕೊಮ್ಮೆ ನಡೆಯುವ ಗ್ರಾಮದ ಎಲ್ಲ ದೇವತೆಗಳಿಗೆ ಗ್ರಾಮದ ಮಹಿಳೆಯರು ನೈವೇದ್ಯ ಅರ್ಪಿಸಿ, ಗ್ರಾಮದ ಕುಂಭೋತ್ಸವ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಶೇಷವಾಗಿ ಬುಧವಾರ ಬೆಳಗಿನ ಜಾವ ಒಂದು ಗಂಟೆಯಿಂದ ಗ್ರಾಮದ ಎಲ್ಲ ಮೇಟಿ ಕುಂಭಗಳು ಗ್ರಾಮದ ಸಾರ್ವಜನಿಕರು ಭಕ್ತಿಯಿಂದ ಸಕಲ ಡೊಳ್ಳು, ಮೇಳ ವಾದ್ಯ ವೃಂದದೊಂದಿಗೆ ಕಳಸ ಕುಂಭೋತ್ಸವದೊಂದಿಗೆ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತ ಮಹಾ ಪ್ರಸಾದವನ್ನು ಸಲ್ಲಿಸಿ ಆಗಮಿಸುತ್ತಾರೆ.ಗ್ರಾಮದಲ್ಲಿ ರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ 7 ವರೆಗೆ ನಿರಂತರ ಭಕ್ತಿಯಿಂದ ಸಾಲಾಗಿ ಕುಂಭೋತ್ಸವದೊಂದಿಗೆ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಸುಮಾರು 1500ಕ್ಕೂ ಹೆಚ್ಚು ಕಳಸ ಕುಂಭಗಳೊಂದಿಗೆ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಹಬ್ಬ ಆಚರಣೆ ಮಾಡುತ್ತಾರೆ. ಇದರ ಜತೆಗೆ ಗ್ರಾಮದಲ್ಲಿ ಮಿಠಾಯಿ ಅಂಗಡಿಗಳು, ಬಳೆ ಅಂಗಡಿಗಳು, ಹೂವಿನ ಅಂಗಡಿಗಳು. ಗೊಂಬೆ ಅಂಗಡಿಗಳು, ಹೀಗೆ ನಾನಾ ರೀತಿಯ ಅಂಗಡಿಗಳು ಹಬ್ಬದ ಅಂಗವಾಗಿ ನೆಲೆ ಹೂಡಿವೆ.
ಕುಂಭೋತ್ಸವದ ಅಂಗವಾಗಿ ಗ್ರಾಮದಲ್ಲಿ ವಿಶೇಷವಾಗಿ ಶಶಿರೇಖಾ ಪರಿಣಯ ಅರ್ಥಾತ್ ಬಲರಾಮನ ಗರ್ವಭಂಗ ಎನ್ನುವ ಬಯಲಾಟ ಕಾರ್ಯಕ್ರಮ ರಾತ್ರಿ ನಡೆಯಿತು. ಬಂದೋಬಸ್ತ್‌ಗೆ ಸಿರಿಗೇರಿ ಮತ್ತು ತೆಕ್ಕಲಕೋಟೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.