ಹಾವೇರಿ ಜಿಲ್ಲೆಯಾದ್ಯಂತ ಸಂಭ್ರಮದ ದೀಪಾವಳಿ ಆಚರಣೆ

KannadaprabhaNewsNetwork |  
Published : Nov 04, 2024, 12:18 AM IST
ಫೋಟೊ ಶೀರ್ಷಿಕೆ: 3ಹೆಚ್‌ವಿಆರ್1ಹಾವೇರಿ: ನಗರದ ಮನೆಯೊಂದರಲ್ಲಿ ಎತ್ತಿನ ಸಗಣಿಯಿಂದ ಹಟ್ಟಿ ಲಕ್ಕಮ್ಮ, ಪಾಂಡವರನ್ನು ರಚಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿರುವುದು.  | Kannada Prabha

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿಯನ್ನು ಶನಿವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹಾವೇರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಶನಿವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಜಿಲ್ಲೆಯ ರೈತರ ಪ್ರತಿ ಮನೆ ಮನೆಗಳಲ್ಲೂ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಬಲಿ ಪಾಡ್ಯದ ದಿನದಂದು ಮನೆಯಲ್ಲಿ ಎತ್ತಿನ ಸಗಣಿಯಿಂದ ಹಟ್ಟಿ ಲಕ್ಕಮ್ಮ, ಪಾಂಡವರನ್ನು ರಚಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ರೈತಾಪಿ ವರ್ಗದ ಎಲ್ಲರ ಮನೆಯ ಎಲ್ಲಾ ಕೃಷಿ ಬಳಕೆಯ ಸಾಮಗ್ರಿಗಳನ್ನು ಒಟ್ಟು ಸೇರಿಸಿ ಅರಿಷಿಣ-ಕುಂಕುಮ, ಹೂವುಗಳಿಂದ ಸಿಂಗರಿಸಿದ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ದನ-ಕರುಗಳ ಮೈ ತೊಳೆದು, ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಣ್ಣದ ಹೆಜ್ಜೆ ಗುರುತು, ರಂಗೋಲಿಯ ಅಲಂಕಾರ ಹಟ್ಟಿ ಲಕ್ಕಮ್ಮನ ಪೂಜೆಗೆ ವಿಶೇಷ ಮೆರಗು ತಂದಿದ್ದವು. ಸಂಜೆ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಯಿತು.ಇನ್ನೂ ಕೆಲವರು ಮನೆಗಳಿಗೆ, ಅಂಗಡಿ-ಮುಂಗಟ್ಟುಗಳಿಗೆ ತಳಿರು ತೋರಣಕಟ್ಟಿ, ರಂಗೋಲಿ ಹಾಕಿ, ದೀಪಾಲಂಕಾರದ ಮೂಲಕ ಹಣ್ಣು, ಹೂವು ಹಾಗೂ ಸಿಹಿ ಆಹಾರ ಪದಾರ್ಥ ತಯಾರಿಸಿ ನೈವೇದ್ಯ ಮಾಡಿ, ಲಕ್ಷ್ಮಿ ಪೂಜೆ ಸಲ್ಲಿಸಿದರು. ಅನೇಕರು ಸಂಜೆ ಹೊತ್ತಿಗೆ ತಮ್ಮ ಅಂಗಡಿಗಳನ್ನು ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಿ, ರಂಗುರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ, ಹಣತೆ, ಮೊಂಬತ್ತಿಗಳನ್ನು ಸಾಲು ಸಾಲಾಗಿ ಹಚ್ಚಿ, ಪಟಾಕಿ ಸಿಡಿಸಿ ದೀಪಾವಳಿ ಪೂಜೆ ನೆರವೇರಿಸಿದರು.ಸಂಜೆಯಾಗುತ್ತಿದ್ದಂತೆ ನಗರದ ಅಂಗಡಿಗಳೆಲ್ಲ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದವು. ಬಹುತೇಕ ಎಲ್ಲ ಮನೆ ಹಾಗೂ ಅಂಗಡಿಗಳಲ್ಲಿಯೂ ವಿದ್ಯುತ್ ಅಲಂಕಾರ ಮಾಡಿದ್ದರಿಂದ ಇಡೀ ನಗರ, ಹಳ್ಳಿಗಳು ಬೆಳಕಿನಲ್ಲಿ ಮಿಂಚುವಂತಿತ್ತು. ಸಂಜೆ ಹೊತ್ತು ಮಾರುಕಟ್ಟೆ ಪ್ರದೇಶದೆಲ್ಲೆಡೆ ಪೂಜೆ, ಸಿಡಿ ಮದ್ದಿನ ಶಬ್ದ, ಚಿಣ್ಣರ ಕೈಯಲ್ಲಿದ್ದ ಮಿಂಚಿನಕಿಡಿ ಸೂಸುವ ಸುರುಸುರ ಬತ್ತಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು.ದೀಪಾವಳಿಯಲ್ಲಿ ಮಕ್ಕಳಿಗೆ ಪಟಾಕಿ ಹೊಡೆಯುವುದೇ ಹಬ್ಬ. ಮಕ್ಕಳಿಗಾಗಿ ಚಟ್‌ಪಟ್, ಛೋಟಾ ಭೀಮ್, ಆನೆ, ಮಂಗನಬಾಲ ಚಿತ್ರದ ಪಟಾಕಿಗಳು ಸೆಳೆಯುತ್ತಿದ್ದರೆ, ಮಹಿಳೆಯರು ಸುರುಸರು ಬತ್ತಿ, ಕುಡಕಿ, ಗಿರಿಗಿರಿ ಸೇರಿದಂತೆ ನಾನಾ ಬಗೆಯ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಹಬ್ಬದ ಹಿನ್ನೆಲೆಯಲ್ಲಿ ನಗರದ ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು. ರೈತಾಪಿ ವರ್ಗದ ಎಲ್ಲರ ಮನೆಯ ಎಲ್ಲಾ ಕೃಷಿ ಬಳಕೆಯ ಸಾಮಗ್ರಿಗಳನ್ನು ಒಟ್ಟು ಸೇರಿಸಿ ಅರಿಷಣ- ಕುಂಕುಮ, ಹೂವುಗಳಿಂದ ಸಿಂಗರಿಸಿದ ಸಗಣಿ ಹಟ್ಟಿ ಲಕ್ಕಮ್ಮ ಇಟ್ಟು ಪೂಜೆ ಸಲ್ಲಿಸಿದರು. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ದನ-ಕರುಗಳ ಮೈ ತೊಳೆದು, ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಹೋರಿ ಬೆದರಿಸುವ ಕಾರ್ಯಕ್ರಮ: ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲೆಯ ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಸಾಂಪ್ರದಾಯಕ ಹೋರಿ ಬೆದರಿಸುವ ಕಾರ್ಯಕ್ರಮ ನಡೆಯಿತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ವಿಶೇಷ ಮಾನ್ಯತೆ ಪಡೆದಿರುವ ಸಾಂಪ್ರದಾಯಿಕ ಕೊಬ್ಬರಿ ಹೋರಿ ಬೆದರಿಸುವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ನಡೆಸಲಾಯಿತು.ಜಿಲ್ಲೆಯಲ್ಲಿ ಅನ್ನದಾತ ತನ್ನ ನೆಚ್ಚಿನ ಸಂಗಾತಿ ಹೋರಿಯನ್ನು ಬೆದರಿಸಿ, ಓಡಿಸಿ ದೀಪಾವಳಿಯ ಸಂಭ್ರಮ ಅನುಭವಿಸಿದರು. ಬಲಿಪಾಡ್ಯದ ದಿನ ಬಹುತೇಕರು ಹೋರಿ ಬೆದರಿಸಿದರು. ದೀಪಾವಳಿ ಹಬ್ಬ ಸಂದರ್ಭದಲ್ಲಿ ಆರಂಭವಾಗುವ ಈ ಸ್ಪರ್ಧೆಗಳು ಸುಮಾರು ಒಂದು ತಿಂಗಳು ಕಾಲ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯಲು ನಾಂದಿ ಹಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!