ಬಾಗೇಪಲ್ಲಿ ವೃತ್ತದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ । ನಾವೆಲ್ಲರೂ ಎಲ್ಲ ಮತಗಳನ್ನು ಗೌರವಿಸಿ ಬಾಳಬೇಕು: ಗೌಸ್ ಪಾಷಾ
ಹಜರತ್ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.
ನಗರದ ಜಾಮಿಯಾ ಮಸೀದಿಯಿಂದ ಆಜಾದ್ ಚೌಕದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಮೆರವಣಿಗೆಯ ಮೂಲಕ ಸಾಗಿ ಕೋಲಾರ ವೃತ್ತದವರೆಗೆ ಹೊರಟು ನಂತರ ಬಾಗೇಪಲ್ಲಿ ವೃತ್ತದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಜಾಮಿಯಾ ಮಸೀದಿ ಅಧ್ಯಕ್ಷ ಗೌಸ್ ಪಾಷಾ ಮಾತನಾಡಿ, ಭಾವೈಕ್ಯತೆಯ ನಾಡು ನಮ್ಮ ಭಾರತದೇಶವಾಗಿದ್ದು ಇಲ್ಲಿ ನಾವೆಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಒಳ್ಳೆಯ ಸಂಬಂಧ, ಸಹಬಾಳ್ವೆಯೊಂದಿಗೆ ಜೀವನ ನಡೆಸುವುದು ನಮ್ಮ ನೆಲೆಯ ಮಹತ್ವದ ಗುಣವಾಗಿದ್ದು ಅದರಂತೆ ನಾವೆಲ್ಲರೂ ಎಲ್ಲ ಮತಗಳನ್ನು ಗೌರವಿಸಿ ಬಾಳಬೇಕೆಂದರು.
ಪ್ರವಾದಿ ಮುಹಮ್ಮದ್ ಅವರು ಬಡವರ ಹಾಗೂ ಹಸಿವೆ ಹೆಚ್ಚಿನ ಮಹತ್ವ ನೀಡಿದ ಕಾರಣ ಹಬ್ಬದಂದು ಅನ್ನ ಸಂತರ್ಪಣೆ ಮಾಡುವುದು ಸಂಪ್ರದಾಯ.ಉಳ್ಳವರು ಮಸೀದಿಗಳಲ್ಲಿ ಊಟ ಮಾಡಿಸುವುದು ಹಾಗೂ ಬಡವರಿಗೆ ಬಟ್ಟೆ, ನಗದು ದಾನ ಮಾಡುವ ಸಂಪ್ರದಾಯವೂ ಇದೆ. ಅವರ ಅನುಯಾಯಿ ಮುಸ್ಲಿಮರೆಲ್ಲರೂ ಈ ಸಂಪ್ರದಾಯ ಪಾಲನೆ ಮಾಡುತ್ತಾ ಬಂದಿದ್ದಾರೆ
ಜಾಮಿಯಾ ಮಸೀದಿ ಕಮಿಟಿಯ ಎಲ್ಲಾ ಸದಸ್ಯರು ಸೇರಿದಂತೆ ನಗರ ಭಾಗದ ಎಲ್ಲ ಮಸೀದಿಗಳ ಮುಖ್ಯಸ್ಥರು, ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.