ಗುಟ್ಕಾ, ಪಾನ್ ಮಸಾಲ ಬ್ಯಾನ್‌ಗೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿ ಜಿಲ್ಲಾ ಅಡಕೆ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಮೂರು ದಿನಗಳ ಪ್ರತಿಭಟನಾ ಪಾದಯಾತ್ರೆ ಬುಧವಾರ ಆರಂಭಿಸಲಾಯಿತು.

- ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಜಿಲ್ಲಾ ಕೇಂದ್ರಕ್ಕೆ 3 ದಿನಗಳ ಪಾದಯಾತ್ರೆ । - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಟ್ಕಾ, ಪಾನ್ ಮಸಾಲ ಬ್ಯಾನ್‌ಗೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿ ಜಿಲ್ಲಾ ಅಡಕೆ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಮೂರು ದಿನಗಳ ಪ್ರತಿಭಟನಾ ಪಾದಯಾತ್ರೆ ಬುಧವಾರ ಆರಂಭಿಸಲಾಯಿತು.

ನಗರದ ಹೊರವಲಯದ ಆವರಗೆರೆ ಗ್ರಾಮದಿಂದ ದಾವಣಗೆರೆ ಉತ್ತರ, ದಕ್ಷಿಣಗಳು, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ, ಹರಿಹರ ಕ್ಷೇತ್ರಗಳಿಂದ ಒಕ್ಕೂಟದ ನೇತೃತ್ವದಲ್ಲಿ ಅಡಕೆ ಬೆಳೆಗಾರರು ಪಾದಯಾತ್ರೆ ಆರಂಭಿಸಿ, ರಾಜ್ಯ ಸರ್ಕಾರದ ರೈತವಿರೋಧಿ ನೀತಿ, ಧೋರಣೆ ವಿರುದ್ಧ ಘೋಷಣೆ ಕೂಗಿದರು.

ಆವರಗೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ರೈತ ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಸ್.ಜಗದೀಶ ಇತರರ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ, ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು.

ಲೋಕಿಕೆರೆ ನಾಗರಾಜ ಮಾತನಾಡಿ, ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಅಡಕೆ ಬೆಳೆಗಾರರ ಒಕ್ಕೂಟದಿಂದ ಮೂರು ದಿನಗಳ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಇಂದು ಪಾದಯಾತ್ರೆ ಆರಂಭವಾಗಿದ್ದು, ಪಕ್ಷಾತೀತ ಈ ಹೋರಾಟದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಆವರಗೆರೆ ಗ್ರಾಮದಿಂದ ಪಾದಯಾತ್ರೆ ಹೊರಟು ಚಿಕ್ಕನಹಳ್ಳಿ, ಲಿಂಗದಹಳ್ಳಿ, ಬಸವನಾಳ್ ಗೊಲ್ಲರಹಟ್ಟಿ, ಬಸವನಾಳ್, ರಾಂಪುರ, ನಾಗರಕಟ್ಟೆ, ಕಾಡಜ್ಜಿ, ಪುಟಗನಾಳ್, ಬೇತೂರು ಮಾರ್ಗವಾಗಿ ಕಲ್ಪನಹಳ್ಳಿ ತಲುಪಿಸಿ, ಅಲ್ಲಿ ವಾಸ್ತವ್ಯ ಮಾಡಲಿದೆ ಎಂದರು.

ಆ.27ರ ಬೆಳಗ್ಗೆ 9.30ಕ್ಕೆ ಕಲ್ಪನಹಳ್ಳಿ ಬಿಟ್ಟು ಚಿಕ್ಕಬೂದಿಹಾಳ್, ಆವರಗೊಳ್ಳ, ಕಕ್ಕರಗೊಳ್ಳ, ದೊಡ್ಡಬಾತಿ ಮಾರ್ಗವಾಗಿ ತೆರಳಿ, ಹಳೇ ಬಾತಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದೇವೆ. ಆ.28ರ ಬೆಳಗ್ಗೆ 9.30ಕ್ಕೆ ಹಳೇ ಬಾತಿಯಿಂದ ಹೊರಟು, ಶಾಬನೂರು ಮಾರ್ಗವಾಗಿ ಬೈಪಾಸ್ ರಸ್ತೆ ಬಳಿ ಜಿಲ್ಲೆ ವಿವಿಧ ಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆಗಳು ಆಗಮಿಸಲಿದ್ದು, ಅಲ್ಲಿಂದ ಎಲ್ಲ ಕ್ಷೇತ್ರಗಳಿಂದ ಬಂದ ಪಾದಯಾತ್ರಿಗಳು ಸೇರಿ, ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದರು.

ಗುಟ್ಕಾ, ಪಾನ್ ಮಸಾಲ ಬ್ಯಾನ್ ಮಾಡುವುದಾಗಿ ಸರ್ಕಾರ ಹೇಳುತ್ತಿದ್ದಂತೆ ₹53-₹54 ಸಾವಿರ ಇದ್ದ ಅಡಕೆ ಬೆಲೆ ದಿಢೀರನೇ ₹44 ಸಾವಿರಕ್ಕೆ ಇಳಿದಿದೆ. ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯುವ ರೈತರು ಈಗ ಕಂಗಾಲಾಗಿದ್ದಾರೆ. ದಾವಣಗೆರೆಯ ಭದ್ರಾ ವ್ಯಾಪ್ತಿಯಲ್ಲಿ 18 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಡಕೆ ಬೆಳೆಯಲಾಗಿದೆ. ಸಣ್ಣ, ಅತಿ ಸಣ್ಣ ರೈತರು, ಅರ್ಧ ಎಕರೆ, ಮುಕ್ಕಾಲು ಎಕರೆ, 1, 2 ಎಕರೆ ಇದ್ದಂತಹ ರೈತರೂ ಅಡಕೆ ಬೆಳೆದಿದ್ದಾರೆ. ಸರಕಾರದ ಇಂತಹ ನಿರ್ಧಾರದಿಂದ ಆ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಅಡಕೆ ಬೆಳೆಗಾರರನ್ನು ಅಧೋಗತಿಗೆ ತಳ್ಳಲು ಮುಂದಾದ ರಾಜ್ಯ ಸರ್ಕಾರದ ರೈತವಿರೋಧಿ ನೀತಿ, ಧೋರಣೆ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲದು. ಗುಟ್ಕಾ, ಪಾನ್ ಮಸಾಲ ನಿಷೇಧ ವಿಚಾರವನ್ನು ಸರ್ಕಾರ ಕೈಬಿಡುವವರೆಗೂ ನಮ್ಮ ಹೋರಾಟ ನಡೆಯಲಿದೆ. ಯಾವ ಬೆಳೆಗೂ ಬೆಲೆ ಇಲ್ಲದ ಸ್ಥಿತಿಯಲ್ಲಿ ಅಡಕೆ ಬೆಳೆ ರೈತರ ಕೈ ಹಿಡಿದಿದ್ದು, ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟ ಆಡುವುದು ಸರಿಯಲ್ಲ. ಗುಟ್ಕಾ, ಪಾನ್ ಮಸಾಲ ನಿಷೇಧದ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ. ಅಡಕೆ ಬೆಳೆಗಾರರ ಜೀವನಕ್ಕೆ ಕೊಳ್ಳೆ ಇಟ್ಟು, ಗುಟ್ಕಾ, ಪಾನ್ ಮಸಾಲ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಸರಿಯಲ್ಲ ಎಂದು ಲೋಕಿಕೆರೆ ನಾಗರಾಜ ಆಕ್ಷೇಪಿಸಿದರು.

ಒಕ್ಕೂಟದ ಹಿರಿಯ ಮುಖಂಡ ಬಿ.ಎಸ್. ಜಗದೀಶ ಮಾತನಾಡಿ, ಸಿಗರೇಟ್, ಮದ್ಯದ ಲಾಬಿಗೆ ಮಣಿದ ರಾಜ್ಯ ಸರ್ಕಾರ ಈಗ ಗುಟ್ಕಾ, ಪಾನ್ ಮಸಾಲ ಬ್ಯಾನ್‌ಗೆ ಮುಂದಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಅಡಕೆ ಬೆಳೆಗಾರರ ಮೇಲೆ ಸರ್ಕಾರದ ಗಧಾ ಪ್ರಹಾರ ಸಹಿಸುವುದಿಲ್ಲ. ಇಂದಿನಿಂದ ಮೂರು ದಿನ ಜಿಲ್ಲೆಯ ಎಲ್ಲ ಕ್ಷೇತ್ರದಿಂದಲೂ ಪಾದಯಾತ್ರೆ ಕೈಗೊಂಡಿದ್ದು, ಉತ್ತರ ಕ್ಷೇತ್ರದಲ್ಲಿ ಒಟ್ಟು 59 ಕಿಮೀ ಪಾದಯಾತ್ರೆ ಸಾಗಲಿದೆ. ಈ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದೇವೆ. ಯಾರದ್ದೋ ಒತ್ತಡ, ಪ್ರಭಾವಕ್ಕೆ ಮಣಿದು, ರಾಜ್ಯ ಸರ್ಕಾರವು ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧಕ್ಕೆ ಮುಂದಾಗಿದ್ದು ಸರಿಯಲ್ಲ ಎಂದರು.

ರೈತ ಪರ ಹೋರಾಟ ಬೆಂಬಲಿಸಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಭಾರತೀಯ ರೈತ ಒಕ್ಕೂಟದ ಶಾಮನೂರು ಎಚ್.ಆರ್. ಲಿಂಗರಾಜ, ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ದಾಮ್ಕೋಸ್ ಅಧ್ಯಕ್ಷ ಬಾತಿ ಶಿವಕುಮಾರ, ಆರ್.ಲಕ್ಷ್ಮಣ, ಧನಂಜಯ ಕಡ್ಲೇಬಾಳು, ರಾಜು ತೋಟಪ್ಪ, ಶಾಮನೂರು ಹರೀಶ, ತಾರೇಶ ನಾಯ್ಕ, ಬಾತಿ ಶಂಕರಮೂರ್ತಿ, ಆರ್.ಜಿ. ನರೇಂದ್ರ, ಬೇತೂರು ನಾಗಣ್ಣ, ಸಿದ್ದೇಶ, ರಾಜು ಶಾಮನೂರು, ರವಿ ಬೇತೂರು, ಎಚ್.ಪಿ.ವಿಶ್ವಾಸ ಇತರರು ಪಾದಯಾತ್ರೆಯಲ್ಲಿದ್ದರು.

- - -

-26ಕೆಡಿವಿಜಿ1: ಪಾನ್ ಮಸಾಲ, ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಹೊರವಲಯದ ಆವರಗೆರೆ ಗ್ರಾಮದಲ್ಲಿ ಜಿಲ್ಲೆ ಅಡಕೆ ಬೆಳೆಗಾರರ ಒಕ್ಕೂಟ ಹಮ್ಮಿಕೊಂಡಿದ್ದ ಮೂರು ದಿನಗಳ ಪಾದಯಾತ್ರೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿದರು.