ಜಿಲ್ಲಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ

KannadaprabhaNewsNetwork | Published : Sep 9, 2024 1:31 AM

ಸಾರಾಂಶ

ಶಿವಮೊಗ್ಗದ ಸೂಕ್ಷ್ಮ ಪ್ರದೇಶದಲ್ಲಿ ಡಿಎಎರ್‌, ಪೊಲೀಸ್‌ ತುಕಡಿಗಳು ಪಥ ಸಂಚಲನ ನಡೆಸಿದವು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾದ್ಯಂತ ಗಣೇಶನ ಹಬ್ಬವನ್ನು ಭಕ್ತರು ಸಡಗರ-ಸಂಭ್ರಮದಿಂದ ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಆಚರಿಸಿದರು.

ವಿವಿಧ ಬಡಾವಣೆಗಳಲ್ಲಿ ತಮ್ಮ ತಮ್ಮ ಕಚೇರಿಗಳಲ್ಲಿ ವಿಘ್ನ ನಿವಾರಕನಾದ ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿ-ಭಾವದಿಂದ ಪೂಜೆ ನೆರವೇರಿಸಿದರು. ಮನೆಗಳಲ್ಲೂ ಹಬ್ಬದ ಸಂಭ್ರಮದ ವಾತಾವರಣ ಜೋರಾಗಿತ್ತು. ಗಣೇಶನಿಗೆ ಪ್ರಿಯವಾದ ಮೋದಕ ಸಿದ್ದಪಡಿಸಿ, ಗಣೇಶನಿಗೆ ಪೂಜೆ ನೆರವೇರಿಸಿದರು.

ಪ್ರತಿ ಬಡಾವಣೆಗಳಲ್ಲೂ ಸಾರ್ವಜನಿಕ ಗಣೇಶೋತ್ಸವವನ್ನೂ ಭಕ್ತರು ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಈಗಾಗಲೇ ಬಡಾವಣೆಗಳಲ್ಲಿ ವಿವಿಧ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಕೆಲವೆಡೆ ಗಣೇಶನ ಪೆಂಡಾಲುಗಳು ಗಮನ ಸೆಳೆಯುವಂತಿದ್ದರೆ, ದೀಪಾಲಂಕಾರದಿಂದ ಬಡಾವಣೆಗಳು ಕಂಗೊಳಿಸತೊಡಗಿದೆ.

ಚಿಕ್ಕಪುಟ್ಟ ಸಾರ್ವಜನಿಕ ಗಣೇಶನನ್ನು ಅಂದೇ ವಿಸರ್ಜಿಸಿದ್ದರೆ, ಮೂರು ದಿನ, ಐದು ದಿನ ಹೀಗೆ ಹಲವು ದಿನಗಳ ಕಾಲ ಅದ್ಧೂರಿಯಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವದ ಸಂಭ್ರಮ ನಡೆಯಿತ್ತಿದೆ.

* ಗಮನ ಸೆಳೆಯುತ್ತಿರುವ ಗಣೇಶ:

ನಗರದಲ್ಲಿ ಬಗೆಬಗೆಯ ಗಣೇಶನ ಮೂರ್ತಿಗಳು ಗಮನ ಸೆಳೆದವು. ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕೋಟೆ ಶ್ರೀ ಬೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಗಣೇಶನ ದರ್ಶನ ಪಡೆದರು.

ರಾಮಣ್ಣ ಶ್ರೇಷ್ಠಿ ಉದ್ಯಾನವನದಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ಅಶೋಕ ಬೀದಿಯಲ್ಲಿ ಓಂ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಾಂಧಿ ಬಜಾರ್‌ನ ಬಸವೇಶ್ವರ ದೇವಾಲಯ, ಶ್ರೀ ಗಂಗಾಪರಮೇಶ್ವರಿ ದೇವಾಲಯ, ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯ ಸೇರಿದಂತೆ ವಿವಿದೆಡೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ವಿನೋಬನಗರ, ರಾಜೇಂದ್ರ ನಗರ, ರವೀಂದ್ರ ನಗರ, ಹೊಸಮನೆ ಬಡಾವಣೆ, ಶರಾವತಿ ನಗರ, ಗೋಪಾಳ, ಆರ್‌ಎಂಎಲ್‌ನಗರ, ವಿದ್ಯಾನಗರ, ಗಾಂಧಿನಗರ, ಬಸವನಗುಡಿ, ತಿಲಕ್ ನಗರ, ದುರ್ಗಿಗುಡಿ, ಕೋಟೆ ರಸ್ತೆ, ಎಸ್‌ಪಿಎಂ ರಸ್ತೆ, ಕಾಶೀಪುರ ಸೇರಿದಂತೆ ಶಿವಮೊಗ್ಗ ನಗರದ ಬಹುತೇಕ ಎಲ್ಲಾ ಬಡಾವಣೆಗಳಲ್ಲೂ ಸ್ಥಳೀಯ ಯುವಕರ ಸಂಘಗಳಿಂದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

*ಬೆಲೆ ಏರಿಕೆ ನಡುವೆಯೂ ಹಬ್ಬಆಚರಣೆ:

ಗಣೇಶ ಹಬ್ಬಕ್ಕೆ ಬೇಕಾಗಿರುವ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಅಗತ್ಯ ವಸ್ತುಗಳ ಖರೀದಿ ಜೋರಾಗಿ ನಡೆಯಿತು.

ನಗರದ ಎಪಿಎಂಸಿ ಮಾರುಕಟ್ಟೆ, ಬಸ್‌ ನಿಲ್ದಾಣ ಪಕ್ಕದ ಹೂವಿನ ಮಾರುಕಟ್ಟೆ, ಗಾಂಧಿ ಬಜಾರ್, ದುರ್ಗಿಗುಡಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಮಗ್ನರಾಗಿದ್ದರು. ಹಣ್ಣು-ತರಕಾರಿ, ಹೂ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಕನಕಾಂಬರ, ಮಲ್ಲಿಗೆ, ಕಾಕಡ, ಸೇವಂತಿಗೆ ಮತ್ತು ಚೆಂಡು ಹೂವಿನ ದರವು ಕೂಡ ಹೆಚ್ಚಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಕಡಿಮೆ ಇದ್ದ ಅಗತ್ಯ ವಸ್ತುಗಳ ಬೆಲೆಗಳು ಹಬ್ಬದ ಹಿನ್ನೆಲೆ ಏರಿಕೆಯಾಗಿದ್ದವು. ಏಲಕ್ಕಿ ಬಾಳೆ ದರ ಹಬ್ಬದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದ್ದು, ಕೆಜಿಗೆ 100 ರಿಂದ 120 ರವರೆಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ, ಕಿತ್ತಳೆ, ಅನಾನಸ್, ದ್ರಾಕ್ಷಿ, ಸೀತಾಫಲ ಸೇರಿ ಮುಂತಾದ ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದು, ತರಕಾರಿ ಬೆಲೆಯಲ್ಲಿ ಅಲ್ಪ ಏರಿಕೆ ಕಂಡು ಬಂದಿತ್ತು.

*ಎಲ್ಲೆಡೆ ಪೊಲೀಸ್ ಕಟ್ಟೆಚ್ಚರ:

ಪೊಲೀಸ್ ಇಲಾಖೆ ವತಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಂತಿ ಸಭೆ ನಡೆಸಲಾಗಿದೆ. ಇಡೀ ಜಿಲ್ಲಾದ್ಯಂತ 4ಸಾವಿರಕ್ಕೂ ಹೆಚ್ಚು ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಜತೆಗೆ ಈದ್ ಮಿಲಾದ್ ಹಬ್ಬದ ಆಚರಣೆಯೂ ಹತ್ತಿರದಲ್ಲಿರುವುದರಿಂದ ಎರಡು ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.

ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡಲು ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದ್ದಾರೆ.

Share this article