ಗೂಳಪ್ಪ ಮುತ್ಯಾ ಪಲ್ಲಕ್ಕಿ ಜಾತ್ರೆಯ ಸಂಭ್ರಮ

KannadaprabhaNewsNetwork | Published : Aug 5, 2024 12:32 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ನಾಗರ ಅಮಾವಾಸ್ಯೆ ಪ್ರಯುಕ್ತ ನಡೆಯುವ ಗೂಳಪ್ಪ ಮುತ್ಯಾ ಜಾತ್ರೆ ಅಪಾರ ಭಕ್ತ ಸಮೂಹದೊಂದಿಗೆ ನಾಗಠಾಣ ಗ್ರಾಮದಲ್ಲಿ ಜರುಗಿತು. ರವಿವಾರ ನಸುಕಿನ ಜಾವ 4 ಗಂಟೆಗೆ ಗೂಳಪ್ಪ ಮುತ್ಯಾನ ಪಲ್ಲಕ್ಕಿಯು ಗ್ರಾಮದ ಭೀರದೇವರ ಪಲ್ಲಕ್ಕಿ, ಕಗ್ಗೋಡ ತಿಪರಾಯ ಮತ್ತು ಲಕ್ಷ್ಮೀ ದೇವರ, ತಿಡಗುಂದಿ ಭೀರದೇವರ ಪಲ್ಲಕ್ಕಿಯೊಂದಿಗೆ ತಳೇವಾಡ, ಗೂಗದಡ್ಡಿ, ಸಾರವಾಡ ಗ್ರಾಮದ ಡೊಳ್ಳಿನ ವಾಲಗ ಹಾಗೂ ಗೊಂಬೆ ಕುಣಿತದೊಂದಿಗೆ, ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ: ನಾಗರ ಅಮಾವಾಸ್ಯೆ ಪ್ರಯುಕ್ತ ನಡೆಯುವ ಗೂಳಪ್ಪ ಮುತ್ಯಾ ಜಾತ್ರೆ ಅಪಾರ ಭಕ್ತ ಸಮೂಹದೊಂದಿಗೆ ನಾಗಠಾಣ ಗ್ರಾಮದಲ್ಲಿ ಜರುಗಿತು. ರವಿವಾರ ನಸುಕಿನ ಜಾವ 4 ಗಂಟೆಗೆ ಗೂಳಪ್ಪ ಮುತ್ಯಾನ ಪಲ್ಲಕ್ಕಿಯು ಗ್ರಾಮದ ಭೀರದೇವರ ಪಲ್ಲಕ್ಕಿ, ಕಗ್ಗೋಡ ತಿಪರಾಯ ಮತ್ತು ಲಕ್ಷ್ಮೀ ದೇವರ, ತಿಡಗುಂದಿ ಭೀರದೇವರ ಪಲ್ಲಕ್ಕಿಯೊಂದಿಗೆ ತಳೇವಾಡ, ಗೂಗದಡ್ಡಿ, ಸಾರವಾಡ ಗ್ರಾಮದ ಡೊಳ್ಳಿನ ವಾಲಗ ಹಾಗೂ ಗೊಂಬೆ ಕುಣಿತದೊಂದಿಗೆ, ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಹಾಲ ಹಳ್ಳಕ್ಕೆ ಹೋಗಿ ಅಲ್ಲಿ ಗಂಗೆ ಸೀತಾಳ ಮಾಡಿಕೊಂಡು ಬೆಳಿಗ್ಗೆ ಬಜಾರದಲ್ಲಿರುವ ದೇವರ ಕಟ್ಟೆಗೆ ಆಗಮನವಾಯಿತು. ಅಲ್ಲಿ ಮಹಿಳೆಯರಾದಿಯಾಗಿ ಎಲ್ಲ ಭಕ್ತರು ದರ್ಶನ ಪಡೆದು, ಪೂಜೆ ಸಲ್ಲಿಸಿದರು. ನಂತರ ಭವ್ಯ ಮೆರವಣಿಗೆ ಮೂಲಕ ಮೂಲ ದೇವಸ್ಥಾನಕ್ಕೆ ಬಂದು ತಲುಪುವ ಮಾರ್ಗದಲ್ಲಿ ಭಕ್ತ ಸಮೂಹ ಭಂಡಾರ, ಬರ್ಫಿ, ಉಣ್ಣೆ ಎಸೆಯುವ ದೃಶ್ಯ ಮನಮೋಹಕವಾಗಿತ್ತು.ಜಾತ್ರೆಯ ನಿಮಿತ್ತ ಭಾರ ಎತ್ತುವ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಚೀಲ ಹಾಗೂ ಗುಂಡು ಎತ್ತುವ ಸ್ಪರ್ಧೆ ಮೈನವಿರೇಳುವಂತಿತ್ತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಮಾಯಮ್ಮನ ಆಟ, ಡೊಳ್ಳಿನ ಪದಗಳ ಗಾಯನ ಭಕ್ತರ ಮನ ಸೆಳೆದವು. ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರಿಗೆ ನಿರಂತರವಾಗಿ ಅನ್ನ ಪ್ರಸಾದ ಇತ್ತು. ಪಲ್ಲಕ್ಕಿಗಳ ಮುಂದೆ ಸಾಲಾಗಿ ದಿವಟಿಗೆಗಳನ್ನು ಹಿಡಿದು ಭಕ್ತರು ಸಾಗುವ ದೃಶ್ಯ ಕಂಡು ಬಂತು. ಜಾತ್ರಾ ಸಮಿತಿಯ ತಿಪರಾಯ ಪೂಜಾರಿ, ಸಿದ್ರಾಮ ಹೊಸಟ್ಟಿ, ಹನಮಂತ ವಾಲೀಕಾರ, ಶಿವಲಿಂಗಪ್ಪ ಹಂಡಿ, ಹನಮಂತ ಬಂಥನಾಳ, ಅಮೋಘಸಿದ್ದ ಗಿರಿಸಾಗರ, ಶ್ರೀಶೈಲ ಪೂಜಾರಿ ಸೇರಿದಂತೆ ಅನೇಕ ಸದಸ್ಯರು ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದ್ದರು.

Share this article