ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಣೆ

KannadaprabhaNewsNetwork | Published : Jan 15, 2024 1:49 AM

ಸಾರಾಂಶ

ಮಕರ ಸಂಕ್ರಾಂತಿಯ ದಿನವಾದ ಭಾನುವಾರ ಹುಬ್ಬಳ್ಳಿಯಲ್ಲಿ ಜನರು ಕುಟುಂಬ ಸಮೇತರಾಗಿ ನಗರದಲ್ಲಿರುವ ಮಠ, ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಭಾನುವಾರ ನಗರದ ಮಠ, ಮಂದಿರಗಳು ಜನರಿಂದ ತುಂಬಿ ಹೋಗಿದ್ದವು. ಉದ್ಯಾನಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸಾಮೂಹಿಕ ಭೋಜನ ಮಾಡಿ ಸಂಭ್ರಮಿಸಿದರು.

ಮಕರ ಸಂಕ್ರಮಣ (ಸಂಕ್ರಾಂತಿ) ಎಂದರೆ ಮಕ್ಕಳಿಗೆ, ಹಿರಿಯರಿಗೆ ಇನ್ನಿಲ್ಲದ ಸಡಗರ, ಸಂಭ್ರಮ. ಕೆಲವರು ಕುಟುಂಬ ಸಮೇತರಾಗಿ ಪ್ರಮುಖ ಪ್ರವಾಸಿ ತಾಣಗಳಿಗೆ, ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಇನ್ನು ಕೆಲವರು ಮನೆಯಲ್ಲಿಯೇ ಬಗೆಬಗೆಯ, ತರಹೇವಾರಿ ಭಕ್ಷ್ಯ ಭೋಜನ ತಯಾರಿಸಿ ದೇವಸ್ಥಾನ, ಪ್ರಮುಖ ಉದ್ಯಾನಗಳಿಗೆ ತೆರಳಿ ಬಗೆಬಗೆಯ ಖಾದ್ಯಗಳನ್ನು ಸವಿದರು.

ಈ ವರ್ಷವೂ ಮಕರ ಸಂಕ್ರಾಂತಿಯ ದಿನವಾದ ಭಾನುವಾರವೂ ಜನರು ಕುಟುಂಬ ಸಮೇತರಾಗಿ ನಗರದಲ್ಲಿರುವ ಮಠ, ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಕೆಲವರು ತಮ್ಮ ಮನೆಯ ದೇವರಿಗೆ ತೆರಳಿ ಪುಣ್ಯಸ್ನಾನ ಮಾಡುವ ಮೂಲಕ ದೇವರ ದರ್ಶನ ಪಡೆದು ಮನೆಗೆ ತೆರಳಿದರು.

ಜೋಳ, ಸಜ್ಜೆ, ಎಳ್ಳಿನ ರೊಟ್ಟಿ, ಶೇಂಗಾ ಹೋಳಿಗೆ, ಎಳ್ಳಿನ ಹೋಳಿಗೆ, ಬದನೆಕಾಯಿ ಪಲ್ಯೆ, ಅವರೆಕಾಳು, ಪುಂಡಿಪಲ್ಲೆ, ಎಣ್ಣಿಗಾಯಿ, ಹೆಸರುಕಾಳಿನ, ಶೇಂಗಾ ಚೆಟ್ನಿ, ಗುರೆಳ್ಳಿನ ಚೆಟ್ನಿ, ಕರಿಹಿಂಡಿ, ಬುಂದೆ, ಮಾದಲಿ, ಮೊಸರನ್ನ, ಚಿತ್ರನ್ನಾ, ಬಗೆಬಗೆಯ ತರಕಾರಿಯಿಂದ ತಯಾರಿಸಿದ ಪಲ್ಲೆ ಸಂಕ್ರಾಂತಿಗೆ ಮೆರಗು ತಂದಿತು.

ಜನವೋ ಜನ:

ಇಲ್ಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಸಿದ್ಧಾರೂಢರ ಮಠಕ್ಕೆ ಜನಸಾಗರವೇ ಹರಿದು ಬಂದಿತು. ಬೆಳಗ್ಗೆಯಿಂದ ಸಂಜೆಯ ವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಸಿದ್ಧಾರೂಢರ, ಗುರುನಾಥರ ದರ್ಶನ ಪಡೆದರು. ಉಣಕಲ್ಲು ಕೆರೆ ಉದ್ಯಾನ, ನೃಪತುಂಗ ಬೆಟ್ಟ, ತೋಳನಕೆರೆಗೂ ಸಾವಿರಾರು ಸಂಖ್ಯೆಯಲ್ಲಿ ಜನತೆ ಕುಟುಂಬ ಸಮೇತರಾಗಿ ಆಗಮಿಸಿ ಉದ್ಯಾನದಲ್ಲಿ ಮಕ್ಕಳೊಂದಿಗೆ ನಲಿದು, ಊಟ ಮಾಡಿ ಸಂಭ್ರಮಿಸಿದರು.

ಜತೆಗೆ ಹುಬ್ಬಳ್ಳಿ ನಗರದ ಜನತೆ ಪಕ್ಕದ ನೀರಸಾಗರ ಜಲಾಶಯ, ಕೆಲಗೇರಿ ಕೆರೆ, ನವೀಲುತೀರ್ಥ, ಬಾದಾಮಿ, ಬನಶಂಕರಿ, ಮಹಾಕೂಟ, ಕೂಡಲಸಂಗಮ, ಗೋಕರ್ಣ, ಧರ್ಮಸ್ಥಳ, ಮುರ್ಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರವಾಸಿ ತಾಣಗಳಿಗೆ ತೆರಳಿ ಪುಣ್ಯಸ್ಮಾನ ಮಾಡಿ ವಾಪಸಾದರು. ನಗರದಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆ ಹೆಚ್ಚಿಸಿದರೂ ಬೆಳಗಿನ ವೇಳೆ ಬಸ್‌ ನಿಲ್ದಾಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬಂದಿತು.

ಇಲ್ಲಿನ ತೋಳನಕೆರೆಯಲ್ಲಿ ಭಾನುವಾರ ಬೆಳಗ್ಗೆ ಹಲವು ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಕಂಗೊಳಿಸಿದರು. ಇಳಕಲ್ಲು, ರೇಷ್ಮೆ ಸೀರೆಯಲ್ಲಿ ಮಿಂಚಿದ ಮಹಿಳೆಯರು ಬಗೆಬಗೆಯ ಸಿಹಿ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಬಂದು ಎಲ್ಲರೂ ಸೇರಿ ಸಂಕ್ರಾಂತಿ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.

Share this article