ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಲಕ್ಷ್ಮಿದೇವಿ ದೇವಸ್ಥಾನದ ಆವರಣದಲ್ಲಿರುವ ನಾಗಮೂರ್ತಿಗೆ ಮುತ್ತೈದೆ ಮಹಿಳೆಯರು ಮಕ್ಕಳು ನನ್ನ ಪಾಲು, ನನ್ನ ಮನೆಯವರ ಪಾಲು, ನನ್ನ ಅಪ್ಪನ ಪಾಲು, ನನ್ನ ತಮ್ಮನ ಪಾಲು, ನನ್ನ ಅಣ್ಣನ ಪಾಲು ಎಂದು ಹಾಲೆರೆದು ನಾಗದೇವರಲ್ಲಿ ಪ್ರಾರ್ಥಿಸಿದರು.
ನೂತನವಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ಸಹೋದರಿಯರನ್ನು ಸಹೋದರರು ಹೋಗಿ ತವರಿಗೆ ಕರೆದುಕೊಂಡು ಬರುವ ಸಂಪ್ರದಾಯ ವಿಶೇಷವಾದದ್ದು, ಮನೆಯಲ್ಲಿ ವಿವಿಧ ಬಗೆಯ ಸಿಹಿ ತಿನಿಸುಗಳಾದ ತಂಬಿಟ್ಟು. ಶೇಂಗಾ ಹುಂಡಿ, ಹೆಸರು ಹುಂಡಿ, ಕರ್ಜಿಕಾಯಿ, ಚಿಗಳಿ, ಕೊಬ್ಬರಿ ಬೆಲ್ಲದ ಹುಂಡಿ, ಕಡಲೆ, ಉರಿದ ಅರಳು ಹಾಲನ್ನು ನಾಗದೇವತೆಗೆ ನೈವೆದ್ಯ ರೂಪದಲ್ಲಿ ಅರ್ಪಿಸಿ, ತವರು ಮನೆ ಮತ್ತು ಗಂಡನ ಮನೆಯವರು ಬಂಧುಗಳು ಸುಖ, ಶಾಂತಿ ಸಮೃದ್ಧಿಯಿಂದ ಇರಲಿ ಎಂದು ಮಹಿಳೆಯರು ಹಾರೈಸುವ ಪ್ರತೀತಿ ಇದೆ ಎಂದು ರುದ್ರಾಂಬಿಕಾ ಆರ್.ಪಾಟೀಲ್ ಅವರು ನಾಗರ ಪಂಚಮಿ ಹಬ್ಬದ ಮಹತ್ವ ತಿಳಿಸಿದರು.ಹಬ್ಬದ ಹಿನ್ನೆಲೆಯಲ್ಲಿ ಯುವತಿಯರು ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಜೋಕಾಲಿ ಆಟ ಹಾಡಿದರೆ, ಮಕ್ಕಳು ಕೊಬ್ಬರಿ ಆಟ ಆಡಿ ಸಂಭ್ರಮಿಸಿದರು.