ಹಲಗೂರು ಹೋಬಳಿಯಾದ್ಯಂತ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಣೆ

KannadaprabhaNewsNetwork | Published : Jan 16, 2025 12:45 AM

ಸಾರಾಂಶ

ಹಲಗೂರಿನ ವ್ಯಾಪಾರಸ್ಥರು ಬೆಳಗ್ಗೆಯಿಂದ ವ್ಯಾಪಾರ ವಹಿವಾಟುಗಳು ನಡೆಸಿದ ನಂತರ ಸಂಜೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಸಂಕ್ರಾಂತಿ ಹಬ್ಬವನ್ನು ಆಚರಿಸುವ ಜೊತೆಗೆ ದನ ಕರುಗಳು ಕಿಚ್ಚಾಯಿಸುವುದನ್ನು ನೋಡುವುದಕ್ಕೆ ತೆರಳಿದ್ದರು.

ಕನ್ನಡಪ್ರಭ ವಾರ್ತೆ ಹಲಗೂರು

ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾಂತಿಯನ್ನು ಹೋಬಳಿಯ ಎಲ್ಲಾ ಗ್ರಾಮಗಳ ರೈತರು ಸಡಗರ ಸಂಭ್ರಮದಿಂದ ಆಚರಿಸಿದರು.

ರೈತರು ತಮ್ಮ ಸಾಕು ದನ ಕರುಗಳಿಗೆ ಅಲಂಕರಿಸಲು ಅಗತ್ಯ ವಸ್ತುಗಳನ್ನು ಖರೀದಿಸಿದರು. ನಂತರ ಹಸು ಕರುಗಳನ್ನು ತೊಳೆದು ಬಣ್ಣ ಬಣ್ಣದ ಟೇಪುಗಳನ್ನು ಹಾಗೂ ಬಲೂನ್‌, ಹೂವಿನ ಹಾರಗಳನ್ನು ಹಾಕಿ ಸಿಂಗರಿಸಿ ಕಿಚಾಯಿಸುವುದಕ್ಕೆ ಕರೆದೊಯ್ಯಲಾಯಿತು.

ಸಂಜೆ ಕಿಚ್ಚಾಯಿಸಿಕೊಂಡು ಬಂದ ತಮ್ಮ ದನ ಕರುಗಳಿಗೆ ಮನೆಯವರು ಪೂಜೆ ಸಲ್ಲಿಸಿ ಅದಕ್ಕೆ ನೈವೇದ್ಯ ಸಲ್ಲಿಸಿ ಮನೆಯಲ್ಲಿ ಮಾಡಿದ ಸಿಹಿ ಆಹಾರ ಪದಾರ್ಥಗಳನ್ನು ತಿನ್ನಲು ನೀಡಿದರು. ಚಿಕ್ಕತೊರೆ ಸೇತುವೆ ಬಳಿ ಪೂಜೆ ಪುನಸ್ಕಾರ ನಡೆದ ನಂತರ ಕಿಚಾಯಿಸುವ ಕಾರ್ಯಕ್ರಮ ನಡೆಯಿತು. ಈ ದೃಶ್ಯವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಕಾದು ನಿಂತಿದ್ದರು.

ಚಿಕ್ಕ ಹೆಣ್ಣು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿಕೊಂಡು ತಮ್ಮ ಸಂಬಂಧಿಕರ ಮನೆಗೆ ಹಾಗೂ ಅಕ್ಕ ಪಕ್ಕದ ಮನೆಯವರಿಗೆ ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ನೀಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಪ್ರತಿಯೊಂದು ಬೀದಿಗಳಲ್ಲೂ ಹಾಗೂ ಮನೆ ಮುಂಬಾಗ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಕಿಚಾಯಿಸಿಕೊಂಡು ಬರುವ ರಾಸುಗಳಿಗೆ ಸ್ವಾಗತ ಕೋರಿದರು.

ಹಲಗೂರಿನ ವ್ಯಾಪಾರಸ್ಥರು ಬೆಳಗ್ಗೆಯಿಂದ ವ್ಯಾಪಾರ ವಹಿವಾಟುಗಳು ನಡೆಸಿದ ನಂತರ ಸಂಜೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಸಂಕ್ರಾಂತಿ ಹಬ್ಬವನ್ನು ಆಚರಿಸುವ ಜೊತೆಗೆ ದನ ಕರುಗಳು ಕಿಚ್ಚಾಯಿಸುವುದನ್ನು ನೋಡುವುದಕ್ಕೆ ತೆರಳಿದ್ದರು.

ರೈತರು ವರ್ಷಪೂರ್ತಿ ಬೆಳೆದ ಫಸಲುಗಳನ್ನು ಒಕ್ಕಣೆ ಮಾಡುವುದು ಸಂಕ್ರಾಂತಿ ಹಬ್ಬದಲ್ಲಿ ತಮ್ಮ ಫಸಲು ಬೆಳೆಯುವುದಕ್ಕೆ ಪೂರ್ಣ ಸಹಕಾರ ನೀಡುತ್ತಿರುವ ತಮ್ಮ ಸಾಕು ಪ್ರಾಣಿಗಳಾದ ದನ ಕರುಗಳಿಗೆ ಹಳೆಯ ಹಗ್ಗಗಳನ್ನು ತೆಗೆದು ಹೊಸ ಹಗ್ಗಗಳನ್ನು ಹಾಕುವುದು ಪದ್ಧತಿ, ಅದಕ್ಕಾಗಿ ಹೊಸ ಹಗ್ಗದ ಜೊತೆ ಗೆಜ್ಜೆ ಕೊರಳಿಗೆ ಕಟ್ಟುವ ಗಂಟೆ, ಗುಳ್ಳಂಪಟ್ಟೆ ಹಾಗೂ ಇನ್ನೂ ವಿವಿಧ ರೀತಿಯ ವಸ್ತುಗಳನ್ನು ಖರೀದಿಸಿ ವಿಶೇಷವಾಗಿ ಅಲಂಕರಿಸಿ ತಮ್ಮ ಸಾಕು ಪ್ರಾಣಿಗಳನ್ನು ಪೂಜಿಸುವುದು ವಾಡಿಕೆ. ಈ ಹಬ್ಬವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸುತ್ತಾರೆ.

Share this article