ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಸಮೀಪದ ಮಾರೇಹಳ್ಳಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಕ್ತಿ ಪ್ರಧಾನವಾಗಿ ಜರುಗಿತು.ದಿವ್ಯ ಬ್ರಹ್ಮ ರಥೋತ್ಸವದ ಅಂಗವಾಗಿ ಮಾರೇಹಳ್ಳಿಯಲ್ಲಿ ವಿರಾಜಮಾನರಾಗಿ ಗಜಾರಣ್ಯ ಕ್ಷೇತ್ರದಲ್ಲಿ ಶ್ರೀಯಃ ಪತಿಯಾಗಿ ಕಲ್ಯಾಣಗುಣ ಪರಿಪೂರ್ಣನಾಗಿ, ಭಕ್ತಾನುಗ್ರಾಹಕನಾಗಿಯೂ ಅವತರಿಸಿ ವೀರಾಜಿಸುತ್ತಿರುವ ಶ್ರೀ ಲಕ್ಷ್ಮಿನರಸಿಂಹಸ್ವಾಮಿಗೆ ಹೋಮ ಹವನ ಅಭಿಷೇಕ ನಡೆದ ಬಳಿಕ ವಿವಿಧ ಹೂಗಳಿಂದ ಆಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳಿಂದ ನೆರೆವೇರಿಸಲಾಯಿತು.ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ವಿವಿಧ ಬಣ್ಣದ ಬಟ್ಟೆ ಹಾಗೂ ಹೂಗಳಿಂದ ಆಲಂಕರಿಸಲಾಗಿತ್ತು. ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ರಥದ ಸಮೀಪ ಕರೆತರಲಾಯಿತು.
ಶಾಸಕರಿಂದ ಚಾಲನೆ:ಶಾಸಕ ಪಿ.ಎಂ ನರೇಂದ್ರಸ್ವಾಮಿ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಸ್ವಾಮಿ ಉತ್ಸವ ಮೂರ್ತಿಯನ್ನು ಬ್ರಹ್ಮರಥಕ್ಕೆ ಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಪಿ.ಎಂ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಗೋವಿಂದ ನಾಮ ಘೋಷಣೆ:
ಬ್ರಹ್ಮ ರಥೋತ್ಸವವನ್ನು ಯುವಕರ ಗುಂಪು ದೇವಸ್ಥಾನದ ಸುತ್ತ ಒಂದು ಸುತ್ತು ಎಳೆದ ಭಕ್ತರು ಗೊವಿಂದ ಗೊಂವಿದ ಎಂಬ ಘೋಷಣೆಯೊಂದಿಗೆ ಭಕ್ತಿಯನ್ನು ಸಮರ್ಪಿಸಿದರು. ತಾಲೂಕಿನ ದಾಸಪ್ಪ ಗುಡ್ಡಪ್ಪಂದಿರು ರಥದ ಮುಂದೆ ಶಂಕ ಜಗಟೆಗಳನ್ನು ಬಾರಿಸುತ್ತ ರಥೋತ್ಸವದಲ್ಲಿ ಹೆಜ್ಜೆ ಹಾಕಿದರು.ಚಾಮರಾಜನಗರ, ಬೆಂಗಳೂರು, ಮೈಸೂರು, ಕೆ.ಆರ್ ನಗರ, ಮಂಡ್ಯ, ಹಾಸನ, ಬೈರಾಪಟ್ಟಣ, ತಮಿಳುನಾಡು, ತೆಲಂಗಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವಕ್ಕೆ ಹಣ್ಣು ಜವನ ಎಸೆದು ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಧನ್ಯತೆ ಮೆರೆದರು. ವಿಶೇಷವಾಗಿ ಹೊಸದಾಗಿ ಮದುವೆಯಾದ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ ರಥಕ್ಕೆ ಹಣ್ಣು ಜವನ ಎಸೆದರು.ದೇವಸ್ಥಾನಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಹರಕೆವೊತ್ತ ಭಕ್ತರು ಪ್ರಸಾಧ ವಿತರಿಸಿದರು. ಸೇವಾರ್ಥಗಾರರಿಂದ ಪುಷ್ಪಲಂಕಾರ, ಯತ್ರಾದಾನ ಮಂಟಪೋತ್ಸವ, ನಿವೇದನ ಕಾರ್ಯಕ್ರಮಗಳು ನಡೆದರು.ಜಾತ್ರೆ ವೇಳೆ ಮಾವು, ತಿಂಡಿ ತಿಸಿಸು, ಮಕ್ಕಳ ಆಟದ ವಸ್ತುಗಳು, ಪೂಜಾ ಸಾಮಾಗ್ರಿಗಳ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಸರ್ವರಿಗೂ ಒಳ್ಳೆಯದನ್ನು ಉಂಟು ಮಾಡಲಿ, ನಾಡಿಗೆ ಮಳೆ ಬೆಳೆ ಸಮೃದ್ದಿಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಆಶಿಸಿದರು. ಈ ವೇಳೆ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಕುಮಾರ್ ಸೇರಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಜರಿದ್ದರು.