8ರಂದು ‘ಆಧುನಿಕ ಭಗೀರಥರ 57ರ ಸಡಗರ’ ಕಾರ್ಯಕ್ರಮ

KannadaprabhaNewsNetwork |  
Published : Nov 03, 2026, 01:30 AM IST
02 ಜೆ.ಜಿ.ಎಲ್.1)‌ ಜಗಳೂರು ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು. | Kannada Prabha

ಸಾರಾಂಶ

ದಶಕಗಳ ಕನಸು ನನಸಾಗಿ, ಬರದ ನಾಡಿನ ಕೆರೆಗಳಿಗೆ ಜೀವಜಲ ಹರಿಸಿದ ಐತಿಹಾಸಿಕ 57 ಕೆರೆ ತುಂಬಿಸುವ ಯೋಜನೆಯ ಯಶಸ್ಸಿಗೆ ಸಂಭ್ರಮದ ಸಡಗರದ ಕಿರೀಟ ತೊಡಿಸಲು ಜಗಳೂರು ಸಜ್ಜಾಗುತ್ತಿದೆ.

- ತರಳಬಾಳು ಶ್ರೀ ದಿವ್ಯಸಾನ್ನಿಧ್ಯ । ಪಕ್ಷಾತೀತವಾಗಿ ಪಾಲ್ಗೊಳ್ಳಿ: ಶಾಸಕ ದೇವೇಂದ್ರಪ್ಪ ಮನವಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ದಶಕಗಳ ಕನಸು ನನಸಾಗಿ, ಬರದ ನಾಡಿನ ಕೆರೆಗಳಿಗೆ ಜೀವಜಲ ಹರಿಸಿದ ಐತಿಹಾಸಿಕ 57 ಕೆರೆ ತುಂಬಿಸುವ ಯೋಜನೆಯ ಯಶಸ್ಸಿಗೆ ಸಂಭ್ರಮದ ಸಡಗರದ ಕಿರೀಟ ತೊಡಿಸಲು ಜಗಳೂರು ಸಜ್ಜಾಗುತ್ತಿದೆ.

ತಾಲೂಕಿನ ಮಡ್ರಹಳ್ಳಿ (ಗುರುಸಿದ್ದಾಪುರ) ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ನ.8ರಂದು ಭಾನುವಾರ ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ ‘ಆಧುನಿಕ ಭಗೀರಥರ 57ರ ಸಡಗರ’ ಎಂಬ ವಿನೂತನ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 57 ಕೆರೆಗಳಿಗೆ ನೀರು ತುಂಬಿಸುವುದು ಕೇವಲ ನೀರಾವರಿ ಯೋಜನೆಯಲ್ಲ; ಇದು ರೈತರ ಬದುಕಿಗೆ ಭರವಸೆ ತುಂಬಿದ, ಬರದ ನಾಡಿನ ಭವಿಷ್ಯಕ್ಕೆ ಹೊಸ ದಿಕ್ಕು ತೋರಿದ ಮಹತ್ವದ ಸಾಧನೆಯಾಗಿದೆ ಎಂದರು.

ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಸಿರಿಗೆರೆ ಶ್ರೀಗಳು ಕಂಡ ಕನಸಿನ ಕೂಸಾದ ಈ ಯೋಜನೆಗೆ 2018ರಿಂದಲೇ ನಿರಂತರ ಪ್ರಯತ್ನಗಳು ನಡೆದಿವೆ. ಅಂದಿನ ಆಡಳಿತ ಪಕ್ಷಗಳ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಇಲಾಖೆಯ ಸಚಿವರ ಮೇಲೆ ಶ್ರೀಗಳು ಸತತ ಒತ್ತಡ ತಂದು, ಪೈಪ್‌ಲೈನ್ ಕಾಮಗಾರಿಗೆ ವೇಗ ದೊರಕಿಸಿಕೊಟ್ಟಿದ್ದಾರೆ. ನನ್ನ ಆಡಳಿತಾವಧಿಯಲ್ಲಿ ಬಹುತೇಕ ಕೆರೆಗಳಿಗೆ ನೀರು ಹರಿದು, ವರುಣನ ಕೃಪೆಯಿಂದ ಹಲವು ಕೆರೆಗಳು ಕೋಡಿ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಸಿರಿಗೆರೆ ಶ್ರೀಗಳ ಸಮ್ಮುಖದಲ್ಲಿಯೇ ಬಾಗಿನ ಅರ್ಪಣೆ ಕಾರ್ಯಕ್ರಮವನ್ನೂ ನೆರವೇರಿಸಲಾಗಿತ್ತು ಎಂದು ಸ್ಮರಿಸಿದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ದೀಟೂರು ಸಮೀಪದ ಹೊಳೆಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದರಿಂದ ಕೆರೆಗಳು ಕೋಡಿ ಬಿದ್ದಿಲ್ಲ. ಇದರಿಂದ ಬರದ ಆತಂಕ ಎದುರಾಗಿರಬಹುದು. ಆದರೆ, ರೈತರ ಜಮೀನುಗಳ ಅಂತರ್ಜಲ ಮಟ್ಟ ಕುಸಿದಿಲ್ಲ; ಜಾನುವಾರುಗಳಿಗೂ ನೀರಿನ ಅಭಾವ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊಂಡಕುರಿ ಅರಣ್ಯದ 4 ಕೆರೆಗಳಿಗೂ ಗಂಗೆ ಹರಿವು:

57 ಕೆರೆ ತುಂಬಿಸುವ ಯೋಜನೆಯಡಿ ಮಡ್ರಹಳ್ಳಿ ಕೆರೆ, ಮಡ್ರಹಳ್ಳಿ ಹೊಸಕೆರೆ, ಅಗಸನಹಳ್ಳಿ ಹಾಗೂ ಮಾಗಡಿ ಕೆರೆಗಳು ಸೇರ್ಪಡೆಯಾಗಿದ್ದರೂ, ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿತ್ತು. ಕೇಂದ್ರ ಅರಣ್ಯ ಇಲಾಖೆಯೊಂದಿಗೆ ನಿರಂತರ ಚರ್ಚೆ ನಡೆಸಿ, ಮನವಿ ಸಲ್ಲಿಸಿದ ಪರಿಣಾಮ ಒಂದೂವರೆ ತಿಂಗಳ ಹಿಂದೆ ಕಾನೂನು ತೊಡಕು ನಿವಾರಣೆಯಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಕೊಂಡಕುರಿ ಅರಣ್ಯದಂಚಿನ ನಾಲ್ಕೂ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯಡಿ ಬರುವ ಎಲ್ಲ 57 ಕೆರೆಗಳಿಗೂ ನೀರು ಹರಿಯುವ ವಿಶ್ವಾಸವಿದೆ. ಅಲ್ಲದೆ, ಜಮ್ಮಾಪುರ ಮತ್ತು ಬಿದರಕೆರೆಗಳನ್ನೂ ಯೋಜನೆಗೆ ಸೇರ್ಪಡೆಗೊಳಿಸಲು ಹಸಿರು ನಿಶಾನೆ ದೊರೆತಿದೆ ಎಂದು ತಿಳಿಸಿದರು.

57ರ ಸಂಭ್ರಮಕ್ಕೆ 57ರ ವಿಶೇಷ ಮೆರುಗು:

ಕ್ಷೇತ್ರದ ನೀರಾವರಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹ ಈ ಯೋಜನೆ ಯಶಸ್ಸಿನ ನೆನಪು ಮುಂದಿನ ಪೀಳಿಗೆಗೂ ಉಳಿಯುವಂತೆ ವಿನೂತನ ಮೆರವಣಿಗೆ ರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ 57 ಉರಿಮೆಗಳು, 57 ಕಹಳೆಗಳು, 57 ತಮಟೆಗಳು, 57 ಎತ್ತಿನ ಬಂಡಿಗಳು ಹಾಗೂ 57 ಮಹಿಳೆಯರಿಂದ ಕುಂಭಮೇಳದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ತಾಲೂಕಿನಲ್ಲಿ ಬರದ ಛಾಯೆ ಇರಬಹುದು. ಆದರೆ ಜನರ ಭಕ್ತಿ, ಅಭಿಮಾನ ಮತ್ತು ಸಂಭ್ರಮಕ್ಕೆ ಬರವಿಲ್ಲ ಎಂಬುದನ್ನು ಈ ಕಾರ್ಯಕ್ರಮ ಸಾರಲಿದೆ ಎಂದರು.

ರಾಜಕೀಯ ಭೇದ ಮರೆತು ಗಣ್ಯರಿಗೆ ಆಹ್ವಾನ:

ನ.8ರಂದು ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ್ರು, ಎಸ್.ವಿ. ರಾಮಚಂದ್ರ, ಎಚ್.ಪಿ.ರಾಜೇಶ್ ಸೇರಿದಂತೆ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಸಚಿವರು ಹಾಗೂ ಮಾಜಿ ಸಂಸದರನ್ನು ಆಹ್ವಾನಿಸಲಾಗುವುದು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಸವಂತಪ್ಪ ಸೇರಿದಂತೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೂ ವೈಯಕ್ತಿಕವಾಗಿ ಆಹ್ವಾನ ನೀಡಲಾಗುವುದು. ನೀರಾವರಿ ಅಭಿವೃದ್ಧಿಯಂತಹ ಜನಪರ ವಿಚಾರಗಳಲ್ಲಿ ರಾಜಕೀಯ ಭೇದಭಾವಕ್ಕೆ ಅವಕಾಶವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪಕ್ಷಗಳ ಸಹಕಾರ ಅಗತ್ಯ. ಇಂತಹ ವಿಚಾರಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಪ್ರಕಾಶ ರೆಡ್ಡಿ, ಬಿ.ಮಹೇಶ್ವರಪ್ಪ, ಚಿತ್ತಪ್ಪ, ನಿಂಗಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮ್ಮದ್, ಷಂಷುದ್ದೀನ್, ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

- - -

-02ಜೆ.ಜಿ.ಎಲ್.1: ಜಗಳೂರು ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8 ರು. ಹಾಲಿನ ದರ ಏರಿಕೆಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಅಡ್ಡಂಡ ಕಾರ್ಯಪ್ಪಗೆ ಮಸಿ: 2 ಕೇಸ್‌ ದಾಖಲು