ಕನ್ನಡ ಪ್ರಭ ವಾರ್ತೆ ಮದ್ದೂರು
ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಅಪಾರ ನಿರೀಕ್ಷೆಗಳೊಂದಿಗೆ ಕುಮಾರಸ್ವಾಮಿಯವರನ್ನು ಸಂಸತ್ತಿಗೆ ಕಳುಹಿಸಿದ್ದಾರೆ. ಆದರೆ, ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನ ತರುವುದು ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕೇವಲ ರಾಜಕೀಯ ಪ್ರೇರಿತ ದೂರುಗಳನ್ನು ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಅಸೂಯೆಯ ರಾಜಕಾರಣ:ಮಾತೆತ್ತಿದರೆ ಮುಖ್ಯಮಂತ್ರಿ, ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಕೀಳಾಗಿ ನಿಂದಿಸುವ ಮೂಲಕ ಆಡಳಿತ ಯಂತ್ರದ ಆತ್ಮಸ್ಥೈರ್ಯ ಕುಗ್ಗಿಸುವ ನೀಚ ಕೆಲಸಕ್ಕೆ ಕೈಹಾಕಿದ್ದಾರೆ. ಒಬ್ಬ ಜವಾಬ್ದಾರಿಯುತ ನಾಯಕನಾದವನಿಗೆ ದೂರದೃಷ್ಟಿ ಹಾಗೂ ಜನರ ಭವಿಷ್ಯದ ಬಗ್ಗೆ ಕಾಳಜಿ ಇರಬೇಕು. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವುದು, ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು ಜನಪರ ಯೋಜನೆಗಳನ್ನು ಜಾರಿಗೆ ತರುವ ಬದಲು, ಇತರರ ಪ್ರಗತಿಯನ್ನು ಸಹಿಸದೆ ಅಸೂಯೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶಿವಪುರ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ಹಾಗೂ ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಯಾರು ಏನು ಮಾಡಿದ್ದಾರೆ ಗೊತ್ತಿಲ್ಲ. ಏಕಕಾಲಕ್ಕೆ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕಳೆದ 25 ವರ್ಷಗಳಿಂದ ಆಗದ ಕೆಲಸಗಳನ್ನು ಕಳೆದ ಮೂರುವರೆ ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಹಂತ ಹಂತವಾಗಿ ಮಾಡುತ್ತಿದ್ದೇನೆ ಎಂದರು.ಇಲಾಖಾವಾರು ಬಾಕಿ ಇರುವ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಾಳೆ ಕ್ಯಾಬಿನೆಟ್ ಮೀಟಿಂಗ್ ಇದೆ. ಸಭೆಯಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ. ನಿಮ್ಮ ಜೊತೆ ಸೇರಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ಎಂದರು. ಮುಖಂಡರು, ಕಾರ್ಯಕರ್ತರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜಾಗೃತರಾಗಿ ವಿರೋಧಿಗಳಿಗೆ ತಿರುಗೇಟು ನೀಡಬೇಕು. ನಮ್ಮ ಅಭಿವೃದ್ಧಿ ಕೆಲಸಗಳು ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಹಕಾರಿಯಾಗಬೇಕು ಎಂದರು.