ಮಂಡ್ಯ ನಗರದ ತುಂಬೆಲ್ಲಾ ಫ್ಲೆಕ್ಸ್ ಕಸದ ರಾಡಿ ಬಿದ್ದಿದೆ. ಮುಖ್ಯಮಂತ್ರಿ ಕಾರ್ಯಕ್ರಮ ಮುಗಿದು ಎರಡು ದಿನಗಳಾದರೂ ಫ್ಲೆಕ್ಸ್, ಕಟೌಟ್ಗಳು, ಕಮಾನುಗಳು, ಬ್ಯಾನರ್ಗಳು ಯಥಾಸ್ಥಿತಿಯಲ್ಲೇ ಉಳಿದಿವೆ. ಫ್ಲೆಕ್ಸ್ಗಳಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗಿದ್ದರೂ ಅವುಗಳನ್ನು ತೆರವುಗೊಳಿಸುವುದಕ್ಕೆ ನಗರಸಭೆ ಇದುವರೆಗೂ ಮುಂದಾಗಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ತುಂಬೆಲ್ಲಾ ಫ್ಲೆಕ್ಸ್ ಕಸದ ರಾಡಿ ಬಿದ್ದಿದೆ. ಮುಖ್ಯಮಂತ್ರಿ ಕಾರ್ಯಕ್ರಮ ಮುಗಿದು ಎರಡು ದಿನಗಳಾದರೂ ಫ್ಲೆಕ್ಸ್, ಕಟೌಟ್ಗಳು, ಕಮಾನುಗಳು, ಬ್ಯಾನರ್ಗಳು ಯಥಾಸ್ಥಿತಿಯಲ್ಲೇ ಉಳಿದಿವೆ. ಫ್ಲೆಕ್ಸ್ಗಳಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗಿದ್ದರೂ ಅವುಗಳನ್ನು ತೆರವುಗೊಳಿಸುವುದಕ್ಕೆ ನಗರಸಭೆ ಇದುವರೆಗೂ ಮುಂದಾಗಿಲ್ಲ. ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಕಣ್ತೆರೆಯುವುದು ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದ ಮಂಡ್ಯ ವಿಶ್ವವಿದ್ಯಾನಿಲಯದಿಂದ ಆರಂಭವಾಗಿ ಹೆದ್ದಾರಿಯುದ್ದಕ್ಕೂ ಫ್ಲೆಕ್ಸ್ಗಳು ರಸ್ತೆ ವಿಭಜಕದ ಮಧ್ಯವಿರುವ ನಗರಸಭೆ ಜಾಹೀರಾತು ಬೋರ್ಡ್, ವಿದ್ಯುತ್ ಕಂಬಗಳಲ್ಲಿ ತೂಗಾಡುತ್ತಿವೆ. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರ ಕಟೌಟ್ಗಳು, ಎರಡನೇ ಹಂತದ ನಾಯಕರ ಬೃಹತ್ ಫ್ಲೆಕ್ಸ್ಗಳು, ಕಟ್ಟಡಗಳ ಮೇಲೆ ಅಳವಡಿಸಿರುವ ಜಾಹೀರಾತು ಫಲಕಗಳನ್ನೂ ಬಿಡದೆ ಪೋಸ್ಟರ್ಗಳು ರಾರಾಜಿಸುತ್ತಿವೆ. ಹೊಳಲು ಸರ್ಕಲ್ ರಸ್ತೆ, ಮಹಾವೀರ ವೃತ್ತ, ಎಸ್.ಡಿ.ಜಯರಾಂ ವೃತ್ತ, ಫ್ಲೆಕ್ಸ್-ಪೋಸ್ಟರ್ಗಳದ್ದೇ ಕಾರು-ಬಾರು. ಎತ್ತ ತಿರುಗಿದರೂ ರಾಜಕೀಯ ನಾಯಕರು, ಮುಖಂಡರು, ಕಾರ್ಯಕರ್ತರಿರುವ ಫೋಟೋಗಳೇ ಕಣ್ಣಿಗೆ ರಾಚುತ್ತಿವೆ.
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಹಲವಾರು ನಾಯಕರು, ಮುಖಂಡರು, ಕಾರ್ಯಕರ್ತರು ಸಾವಿರಾರು ಫ್ಲೆಕ್ಸ್ಗಳನ್ನು ವಿವಿಧ ಅಳತೆಯಲ್ಲಿ ಮುದ್ರಿಸಿ ಅಳವಡಿಸಿದ್ದಾರೆ. ಲಕ್ಷಾಂತರ ರು. ಹಣವನ್ನು ಫ್ಲೆಕ್ಸ್, ಬ್ಯಾನರ್, ಕಟೌಟ್ಗಳಿಗಾಗಿಯೇ ಖರ್ಚು ಮಾಡಲಾಗಿದೆ. ಕಾರ್ಯಕ್ರಮ ಮುಗಿದ ಕೂಡಲೇ ಅವು ಮಹತ್ವ ಕಳೆದುಕೊಂಡಿದ್ದರೂ ಅವುಗಳನ್ನು ತೆರವುಗೊಳಿಸದಿರುವುದು ನಗರಸಭೆ ಆಡಳಿತ ಹೊಣೆ ಹೊತ್ತವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಅವುಗಳನ್ನು ಸಕಾಲದಲ್ಲಿ ತೆರವುಗೊಳಿಸದಿರುವುದಕ್ಕೆ ಕಾರಣವೇ ತಿಳಿದುಬರದಂತಾಗಿದೆ.
ಕಾರ್ಯಕ್ರಮ ಎರಡು-ಮೂರು ದಿನಗಳು ಇರುವಾಗಲೇ ಎಲ್ಲೆಡೆ ಫ್ಲೆಕ್ಸ್ಗಳು ತಲೆಎತ್ತಿ ನಿಂತವು. ಸಾಮಾನ್ಯವಾಗಿ ಕಾರ್ಯಕ್ರಮ ಮುಗಿದ ಮರುದಿನವೇ ಫ್ಲೆಕ್ಸ್ಗಳನ್ನು ತೆರವುಗೊಳಿಸಬೇಕಿರುವುದು ನಿಯಮ. ಆದರೆ, ನಗರಸಭೆ ಅಧಿಕಾರಿಗಳು ಅತ್ತ ಗಮನಹರಿಸಿದಂತೆ ಕಂಡುಬರುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ನಗರದೊಳಗೆ ರಾರಾಜಿಸುತ್ತಿರುವ ಫ್ಲೆಕ್ಸ್ಗಳು, ಕಮಾನುಗಳು, ಕಟೌಟ್ಗಳು, ಪೋಸ್ಟರ್ಗಳಲ್ಲಿ ಎಷ್ಟಕ್ಕೆ ಅನುಮತಿ ಇದೆ, ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್ಗಳು ಎಷ್ಟು, ಎಷ್ಟು ದಿನಗಳವರೆಗೆ ಅನುಮತಿ ಪಡೆದುಕೊಂಡಿದ್ದಾರೆ, ಅನಧಿಕೃತವಾಗಿ ಎಷ್ಟು ದಿನಗಳ ಕಾಲ ಯಥಾಸ್ಥಿತಿಯಲ್ಲಿ ಉಳಿಸುವುದಕ್ಕೆ ಅವಕಾಶವಿದೆ. ಫ್ಲೆಕ್ಸ್ ಅಳವಡಿಸಲು ಮತ್ತು ತೆರವಿಗೆ ಅನುಸರಿಸಬೇಕಾದ ನಿಯಮಗಳೇನು, ಈ ಫ್ಲೆಕ್ಸ್, ಬ್ಯಾನರ್, ಪೋಸ್ಟರ್, ಕಟೌಟ್ಗಳಿಂದ ನಗರಸಭೆಗೆ ಸಂಗ್ರಹವಾಗಿರುವ ಜಾಹೀರಾತು ಶುಲ್ಕವೆಷ್ಟು ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದಂತಾಗಿದೆ.
ಸಿಎಂ ಕಾರ್ಯಕ್ರಮ ಒಂದೇ ಅಲ್ಲ, ಹುಟ್ಟುಹಬ್ಬ, ಪುಣ್ಯಸ್ಮರಣೆ, ಮರಣಹೊಂದಿದವರು, ವಿವಿಧ ಕಾರ್ಯಕ್ರಮಗಳು ಸೇರಿದಂತೆ ಅನೇಕ ಉದ್ದೇಶಗಳಿಗೆ ಅಳವಡಿಸಲಾಗುವ ಫ್ಲೆಕ್ಸ್ಗಳನ್ನು ವಾರ, ತಿಂಗಳುಗಟ್ಟೆಯಾದರೂ ತೆರವುಗೊಳಿಸುವುದೇ ಇಲ್ಲ. ಬಿಸಿಲು, ಮಳೆ, ಗಾಳಿಗೆ ಅವುಗಳೇ ಒಣಗಿ, ಕಿತ್ತು ಬರಬೇಕು. ಇಲ್ಲವಾದರೆ ಯಾರಾದರೂ ಸ್ವಯಂಪ್ರೇರಿತವಾಗಿ ಫ್ಲೆಕ್ಸ್ಗಳನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿಯವರೆಗೂ ಅವು ಅಲ್ಲೇ ಠಿಕಾಣಿ ಹೂಡಿರುತ್ತವೆ. ಇದು ನಗರ ಸೌಂದರ್ಯದ ಮೇಲೆ ಪರಿಣಾಮ ಬೀರಿದೆ ಎನ್ನುವುದು ಜನರ ದೂಷಣೆಯಾಗಿದೆ.
ಫ್ಲೆಕ್ಸ್ಗಳನ್ನು ಅಳವಡಿಸುವುದು ತಪ್ಪಲ್ಲ. ಆದರೆ, ನಿಗದಿತ ಕಾಲಮಿತಿಯೊಳಗೆ ಅವುಗಳನ್ನು ತೆರವುಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು. ಇಲ್ಲದಿದ್ದರೆ ಅವ್ಯವಸ್ಥೆಗೆ ಎಡೆಮಾಡಿಕೊಟ್ಟಂತಾಗುತ್ತದೆ. ನಗರಸಭೆ ಫ್ಲೆಕ್ಸ್ ಎಂಬ ಕಸವನ್ನು ವ್ಯವಸ್ಥಿತ ರೀತಿಯಲ್ಲಿ ಅವಧಿ ಮುಗಿದ ಕೂಡಲೆ ಎತ್ತಿ ಬಿಸಾಕುವ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಇಲ್ಲದಿದ್ದರೆ ಫ್ಲೆಕ್ಸ್, ಕಟೌಟ್ಗಳು, ಬ್ಯಾನರ್ಗಳ ಅಬ್ಬರದೊಳಗೆ ನಗರವನ್ನೇ ಮುಳುಗಿಸಿದರೂ ಅಚ್ಚರಿಪಡಬೇಕಿಲ್ಲ.ಫ್ಲೆಕ್ಸ್ಗಳ ತೆರವಿಗೆ ಕೂಡಲೇ ಕ್ರಮ ವಹಿಸುತ್ತೇವೆ. ನಾಳೆ (ಮಂಗಳವಾರ)ಯಿಂದಲೇ ಎಲ್ಲಾ ಫ್ಲೆಕ್ಸ್, ಬ್ಯಾನರ್, ಕಟೌಟ್ಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತೇವೆ. ಕೆಲಸದ ಒತ್ತಡದಿಂದ ತೆರವಿಗೆ ಸಾಧ್ಯವಾಗಿರಲಿಲ್ಲ. ಆದಷ್ಟು ಬೇಗ ತೆರವುಗೊಳಿಸಿ ನಗರ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.