ಕನ್ನಡಪ್ರಭ ವಾರ್ತೆ ಗದಗ
ಮುಂಗಾರು, ಹಿಂಗಾರು ಕೊರತೆ, ಬೆಳೆ ಹಾನಿ ಆರ್ಥಿಕ ಸಂಕಷ್ಟದ ಮಧ್ಯ ರೈತರು ಎಲ್ಲವನ್ನು ಮರೆತು ಸಂಪ್ರದಾಯ ಬದ್ಧವಾಗಿ ಸೀಗೆ ಹುಣ್ಣಿಮೆ ಹಬ್ಬವನ್ನ ಮನೆ ಮಂದಿಯೆಲ್ಲಾ ಕೂಡಿ ಸಂಭ್ರಮದಿಂದ ಆಚರಿಸಿದರು.
ಸೀಗೆ ಹುಣ್ಣಿಮೆ ಹಬ್ಬ ಉತ್ತರ ಕರ್ನಾಟಕದ ರೈತಾಪಿ ಕುಟುಂಬಗಳಲ್ಲಿ ವಿಶೇಷ ಮಹತ್ವ ಪಡೆದಿದ್ದು, ಭೂತಾಯಿಯ ಸೀಮಂತದ ಹಬ್ಬವೆಂದೇ ಪ್ರಸಿದ್ಧವಾಗಿರುವ ಈ ಆಚರಣೆಯು ರೈತರು ಭೂಮಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಹಬ್ಬದ ಅಂಗವಾಗಿ ರೈತ ಮಹಿಳೆಯರು ಮನೆಯಲ್ಲಿ ಶೇಂಗಾ-ಎಳ್ಳು ಹೋಳಿಗೆ, ರೊಟ್ಟಿ ವಿವಿಧ ಬಗೆಯೇ ತರಹೇವಾರಿ ಅಡುಗೆಯನ್ನ ಸಿದ್ಧಪಡಿಸಿ ಕುಟುಂಬ ಸಮೇತ ಟ್ರ್ಯಾಕ್ಟರ್, ಚಕ್ಕಡಿ, ಅಟೋ ರೀಕ್ಷಾ, ಬೈಕ್‌ಗಳಲ್ಲಿ ತಮ್ಮ ಹೊಲಗಳಿಗೆ ತೆರಳಿ, ಬನ್ನಿ ಮರದ ಬಳಿ ಅಥವಾ ಸಂಪ್ರದಾಯದಂತೆ ನಿಗದಿಪಡಿಸಿದ ಸ್ಥಳದಲ್ಲಿ ಐದು ಕಲ್ಲುಗಳನ್ನು ಇರಿಸಿ, ಅವುಗಳಿಗೆ ವಿಭೂತಿ, ಕುಂಕುಮ ಹಾಗೂ ಭಂಡಾರ ಹಚ್ಚಿ ಪೂಜಿ ಸಲ್ಲಿಸಿ, ಚೆರಗ ಚೆಲ್ಲಿ ಹಿಂಗಾರು ಬೆಳೆ ಸಮೃದ್ಧವಾಗಿ ಬರಲಿ ಎಂದು ಪ್ರಾರ್ಥಿಸಿದರು. ನಂತರ ಕುಟುಂಬದ ಸದಸ್ಯರು ಹಾಗೂ ಬಂಧುಗಳೊಂದಿಗೆ ಸಾಮೂಹಿಕವಾಗಿ ಕುಳಿತು ಊಟ ಸವಿದು ಸಂಭ್ರಮಿಸಿದರು.